ADVERTISEMENT

ಬೀದಿನಾಯಿ ಬೆನ್ನಟ್ಟಿದ್ದರಿಂದ ಬೈಕ್‌ ಉರುಳಿಬಿದ್ದು ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 10:26 IST
Last Updated 30 ಡಿಸೆಂಬರ್ 2019, 10:26 IST

ಬೆಂಗಳೂರು: ಬೀದಿನಾಯಿಗಳು ಬೆನ್ನಟ್ಟಿದ್ದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಉರುಳಿಬಿದ್ದು ಸವಾರ ಮುನಿಯಲ್ಲಪ‍್ಪ (35) ಎಂಬುವರು ಮೃತಪಟ್ಟಿರುವ ಘಟನೆ ಹೊಸೂರು ರಸ್ತೆಯ ಗುಡ್ಡೇನಹಳ್ಳಿ ಕೆರೆ ಸಮೀಪದಲ್ಲಿ ನಡೆದಿದೆ.

‘ತಮಿಳುನಾಡಿನ ಮುನಿಯಲ್ಲಪ್ಪ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಕೋಮಾರನಹಳ್ಳಿಯಲ್ಲಿ ವಾಸವಿದ್ದರು. ಎಂದಿನಂತೆ ಕೆಲಸ ಮುಗಿಸಿಶನಿವಾರ ಸಂಜೆ ಮನೆಗೆ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಆನೇಕಲ್‌ ಠಾಣೆ ಪೊಲೀಸರು ಹೇಳಿದರು.

‘ಕೆರೆ ಪಕ್ಕದ ರಸ್ತೆಯಲ್ಲಿ ಬೀದಿನಾಯಿಗಳು ಗುಂಪು ಕಟ್ಟಿಕೊಂಡು ನಿಂತಿದ್ದವು. ಅದೇ ಮಾರ್ಗವಾಗಿ ಮುನಿಯಲ್ಲಪ್ಪ ಬೈಕ್‌ನಲ್ಲಿ ಹೊರಟಿದ್ದರು. ಅವರನ್ನು ಗುರಾಯಿಸಿ ಬೊಗಳಲಾರಂಭಿಸಿದ್ದ ನಾಯಿಗಳು ಬೆನ್ನಟ್ಟಿದ್ದವು. ಹೆದರಿದ ಮುನಿಯಲ್ಲಪ್ಪ, ನಾಯಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಭಯದಲ್ಲಿ ವೇಗವಾಗಿ ಬೈಕ್‌ ಚಲಾಯಿಸಿಕೊಂಡು ಹೋಗಿದ್ದರು.’

ADVERTISEMENT

‘ರಸ್ತೆಯಲ್ಲೇ ಬೈಕ್‌ ಉರುಳಿಬಿದ್ದಿತ್ತು. ಮುನಿಯಲ್ಲಪ್ಪ ಅವರ ತಲೆ ಹಾಗೂ ಕೈ–ಕಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಮಾಂಸದಿಂದ ನಾಯಿಗಳು ಹೆಚ್ಚಳ: ‘‌ಸ್ಥಳೀಯ ಮಾಂಸದಂಗಡಿ ಮಾಲೀಕರು, ಕೆರೆ ಸಮೀಪದ ರಸ್ತೆಯ ಅಕ್ಕ–ಪಕ್ಕದಲ್ಲೇ ಮಾಂಸ ಹಾಗೂ ಅದರ ತ್ಯಾಜ್ಯವನ್ನು ತಂದು ಎಸೆಯುತ್ತಿದ್ದಾರೆ. ಅದನ್ನು ತಿನ್ನಲು ನಾಯಿಗಳು ಗುಂಪಾಗಿ ಬರುತ್ತಿವೆ. ಯಾರಾದರೂ ರಸ್ತೆಯಲ್ಲಿ ಬಂದರೆ ಬೆನ್ನಟ್ಟುತ್ತಿವೆ’ ಎಂದು ಸ್ಥಳೀಯರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.