ADVERTISEMENT

ಹಾಸಿಗೆ ಮೀಸಲಿಡದಿದ್ದರೆ ಕಠಿಣ ಕ್ರಮ: ಆರೋಗ್ಯ ಸಚಿವ ಸುಧಾಕರ್‌

ತಜ್ಞರ ಜತೆ ಸಭೆ ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 21:00 IST
Last Updated 15 ಏಪ್ರಿಲ್ 2021, 21:00 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಸಿಗೆಗಳನ್ನು ಮೀಸಲಿಡದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್‌ ನಿಯಂತ್ರಣ ಸಂಬಂಧ ತಜ್ಞರ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಾಸಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೋವಿಡ್‌ ರೋಗಿಗಳಿಗೆ ಹೆಚ್ಚಿನ ಹಾಸಿಗೆ ಮೀಸಲಿಡುವಂತೆ ಕಳೆದ 15 ದಿನಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಕೆಲವು ಆಸ್ಪತ್ರೆಗಳು ಶೇ 15 ರಿಂದ 20 ರಷ್ಟು ಹಾಸಿಗೆ ಮಾತ್ರ ನೀಡಿವೆ. ಉಳಿದವರು ತಲೆ ಕೆಡಿಸಿಕೊಂಡಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಳ್ಳದಿದ್ದರೆ ಕಳೆದ ವರ್ಷದ ರೀತಿಯಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಕೋವಿಡ್ ಅಲ್ಲದ ರೋಗಿಗಳಲ್ಲಿ ತುರ್ತು ಇರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಕೋವಿಡ್‌ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಸರ್ಕಾರ ಸುಮ್ಮನಿರುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರದ ಜತೆ ನಿಲ್ಲಬೇಕು ಎಂದು ಮನವಿ ಮಾಡಿದರು.

ಹೋಟೆಲ್‌ಗಳಲ್ಲಿ ಕೋವಿಡ್‌ ಕೇರ್ ಸೆಂಟರ್‌ ಆರಂಭಿಸಬೇಕು. ಕಾರ್ಪೊರೇಟ್‌ ಆಸ್ಪತ್ರೆಗಳು ಈ ವ್ಯವಸ್ಥೆ ಮಾಡಬೇಕು. ಗಂಭೀರ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕೆಂದು ಸೂಚಿಸಲಾಗಿದೆ ಎಂದು ಸುಧಾಕರ್‌ ಹೇಳಿದರು.

400 ವೈದ್ಯರು ಆರೋಗ್ಯ ಇಲಾಖೆಗೆ

ಕೋವಿಡ್‌ ನಿಭಾಯಿಸಲು 400 ಕ್ಕೂ ಹೆಚ್ಚು ವೈದ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಗೆ ನೀಡಿದೆ. ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯನ್ನು ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಚಿಕಿತ್ಸೆಗಾಗಿ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದರು.

ವಿಕ್ಟೋರಿಯಾದಲ್ಲಿ 300 ಹಾಸಿಗೆಗಳು ಕೋವಿಡ್‌ಗೆ ಮೀಸಲಿದ್ದು, ಎರಡು ದಿನಗಳೊಳಗೆ 500 ಕ್ಕೆ ಏರಿಸಲು ಸೂಚಿಸಲಾಗಿದೆ. ಬೌರಿಂಗ್‌ನಲ್ಲಿ 300, ಚರಕ ಆಸ್ಪತ್ರೆಯಲ್ಲಿ ಎರಡು ದಿನದೊಳಗೆ 150, ಘೋಷಾ ಆಸ್ಪತ್ರೆಯಲ್ಲಿ 100 ಮತ್ತು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನು ಕೋವಿಡ್‌ಗೆ ಮೀಸಲಿಡಲು ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.