ADVERTISEMENT

ಬೇಡಿಕೆ ಈಡೇರದಿದ್ದರೆ ಮಾ.16ರಿಂದ ಮುಷ್ಕರ

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 21:40 IST
Last Updated 2 ಮಾರ್ಚ್ 2021, 21:40 IST
ಸಾರಿಗೆ ನೌಕರರು ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕೋಡಿಹಳ್ಳಿ ಚಂದ್ರಶೇಖರ್, ಆರ್.ಚಂದ್ರಶೇಖರ್ ಇದ್ದರು            –ಪ್ರಜಾವಾಣಿ ಚಿತ್ರ
ಸಾರಿಗೆ ನೌಕರರು ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕೋಡಿಹಳ್ಳಿ ಚಂದ್ರಶೇಖರ್, ಆರ್.ಚಂದ್ರಶೇಖರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾರಿಗೆ ನೌಕರರ ಬೇಡಿಕೆಗಳನ್ನು ಮಾರ್ಚ್‌ 15ರೊಳಗೆ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ, ಮಾರ್ಚ್‌ 16ರಿಂದ ರಾಜ್ಯದಾದ್ಯಂತ ಬಸ್‌ ಬಂದ್‌ ಮಾಡಿ ಮುಷ್ಕರ ನಡೆಸಲಾಗುವುದು’ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ನಗರದ ಮೌರ್ಯ ವೃತ್ತದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಸಾರಿಗೆ ನೌಕರರ ಬೇಡಿಕೆಗೆ ಈಡೇರಿಸಲು ಸರ್ಕಾರಕ್ಕೆ ನೀಡಲಾಗಿದ್ದ ಗಡುವು ಮುಗಿಯುತ್ತಿದ್ದು, ಯಾವುದೇ ಬೇಡಿಕೆಗಳು ಈಡೇರಿಲ್ಲ. ಕೊನೆಯದಾಗಿ ಮಾರ್ಚ್‌ 15ರವರೆಗೆ ಕಾಯುತ್ತೇವೆ. ಡಿಸೆಂಬರ್‌ನಲ್ಲಿ ಯಾವುದೇ ಸಿದ್ಧತೆ ಇಲ್ಲದೆ ಏಕಾಏಕಿ ಮುಷ್ಕರ ಮಾಡಿದ್ದೆವು. ಆದರೆ, ಈ ಬಾರಿ ಸಂಪೂರ್ಣ ಬಸ್‌ ಸಂಚಾರ ಬಂದ್‌ ಮಾಡುವ ಮೂಲಕ ಮುಷ್ಕರ ನಡೆಸಲಾಗುವುದು’ ಎಂದರು.

ADVERTISEMENT

‘ಮುಷ್ಕರದ ಪರಿಣಾಮಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನೇರಹೊಣೆಯಾಗಲಿದ್ದಾರೆ. ಸಾರಿಗೆ ನೌಕರರ ಕುಟುಂಬಗಳು ಬೀದಿಗಿಳಿದು ಪ್ರತಿಭಟನೆ ಮಾಡಲಿವೆ. ಸರ್ಕಾರಕ್ಕೆ ಈಗಲೂ ಸಮಯ ಇದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಯೋಚಿಸುವುದು ಒಳ್ಳೆಯದು’ ಎಂದು ಹೇಳಿದರು.

ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್,‘ಆರನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೆ ಜಾರಿ ಮಾಡಬೇಕು. ಸರ್ಕಾರಿ ನೌಕರರ ಆರೋಗ್ಯ ಸೇವೆಗಳು ನಮಗೂ ನೀಡಬೇಕು. ಅಂತರ್ ನಿಗಮ ವರ್ಗಾವಣೆ ಪದ್ಧತಿ ತರಬೇಕು. ಮೇಲಧಿಕಾರಿಗಳಿಂದ ಕಿರುಕುಳ ತಡೆಯಬೇಕು. ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಬೇಕು. ಕೊರೊನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ ನೀಡಬೇಕು‘ ಎಂದರು.

‘ನಿಗದಿತ ಗಡುವಿನೊಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಈ ಎಲ್ಲ ಬೇಡಿಕೆಗಳನ್ನು ಬದಿಗಿಟ್ಟು, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಪಟ್ಟು ಹಿಡಿಯುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.