ಬೆಂಗಳೂರು: ಪ್ರವಾಹ, ಚಂಡಮಾರುತ ಸಂದರ್ಭದಲ್ಲಿ ಜನರ ಜೀವ ರಕ್ಷಿಸುವ ಪೊಲೀಸರು, ಸೈನಿಕರಿಗೆ ನೆರವಾಗುವ ‘ಜಲ ರಕ್ಷಕ್’ ಸಾಧನವನ್ನು ನಗರದ ಸಾಯಿರಾಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ‘ರಾಷ್ಟ್ರೀಯ ಆವಿಷ್ಕಾರ ದಿನ’ದ ನಿಮಿತ್ತ ಹಮ್ಮಿಕೊಂಡಿದ್ದ ವಿಜ್ಞಾನ–ತಂತ್ರಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನವನ್ನು ಪ್ರದರ್ಶಿಸಿದರು.
ಸಮುದ್ರ, ನದಿ, ಸರೋವರಗಳಲ್ಲಿ ಸಿಲುಕಿಕೊಂಡವರು, ಪ್ರವಾಹ, ಚಂಡಮಾರುತ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗೆ ಮುಂದಾಗುವ ಯೋಧರಿಗೆ ಈ ಸಾಧನ ನೆರವಾಗುತ್ತದೆ. ದೂರದಿಂದಲೇ ಸಾಧನವನ್ನು ನಿಯಂತ್ರಿಸಬಹುದಾಗಿದೆ. ಯಾಂತ್ರೀಕೃತವಾಗಿ ತೇಲುವ ಈ ಸಾಧನದಿಂದ ಯೋಧರಲ್ಲದೆ, ಸಂತ್ರಸ್ತರ ರಕ್ಷಣೆಯನ್ನೂ ಸುಲಭವಾಗಿ ಮಾಡಬಹುದು ಎಂದು ವಿದ್ಯಾರ್ಥಿಗಳು ವಿವರಿಸಿದರು.
ವಿವಿಧ ಮಾದರಿ: ನೀರಿನ ಗುಣಮಟ್ಟ ಅಳೆಯುವ, ಮತ್ಸ್ಯ ಸಂಪತ್ತು ರಕ್ಷಿಸುವ, ರೈತರು, ಮೀನುಗಾರರ ಆದಾಯ ಹೆಚ್ಚಿಸುವ ‘ಮತ್ಸ್ಯ ಸ್ಮಾರ್ಟ್ ವಾಟರ್ ಸರ್‌ಫೇಸ್ ವೆಹಿಕಲ್’ ಅನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಲುಷಿತ ನೀರು ಮತ್ತು ರೋಗರುಜಿನಗಳಿಂದಾಗಿ ರೈತರು ಪ್ರತಿವರ್ಷ ತಮ್ಮ ಉತ್ಪನ್ನಗಳಲ್ಲಿ ಶೇ 60 ರಷ್ಟು ಹಾನಿಮಾಡಿಕೊಳ್ಳುತ್ತಾರೆ. ಈ ಸಾಧನವು ಸಂಭವನೀಯ ಹಾನಿಯನ್ನು ತಪ್ಪಿಸುತ್ತದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.
ಒಂದು ಮೀಟರ್ ದೂರದಿಂದಲೇ ಹೃದಯ, ನಾಡಿ ಬಡಿತ ಪತ್ತೆ ಮಾಡುವ ರೋಲಿಂಗ್ ಥಂಡರ್, ರೋಗಿಗಳಿಗೆ ಔಷಧಿ, ಆಹಾರ ಪೂರೈಸುವ, ವ್ಯಾಪಾರ ಮತ್ತು ಸೇವಾ ಕ್ಷೇತ್ರದಲ್ಲಿಯೂ ಬಳಸಬಹುದಾದ ಬಹುಪಯೋಗಿ ವಾಹನ ‘ನಂದಿ’ಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.