ADVERTISEMENT

ಪರೀಕ್ಷೆಗೆ ಸೇರಿಸದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:15 IST
Last Updated 21 ನವೆಂಬರ್ 2018, 19:15 IST
ಶ್ರೇಯಸ್
ಶ್ರೇಯಸ್   

ಬೆಂಗಳೂರು: ‘ಹಾಜರಾತಿ ಕಡಿಮೆ ಇದ್ದ ಕಾರಣಕ್ಕೆ ಕಾಲೇಜು ಆಡಳಿತ ಮಂಡಳಿಯವರು ನನಗೆ ಪರೀಕ್ಷೆಗೆ ಸೇರಿಸುತ್ತಿಲ್ಲ’ ಎಂದು ಪತ್ರ ಬರೆದಿಟ್ಟು ಬಿಎಸ್ಸಿ ವಿದ್ಯಾರ್ಥಿ ಶ್ರೇಯಸ್ ನಂದನ್ (24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಗಜೀವನ್‌ರಾಮ ನಗರ ನಿವಾಸಿಯಾದ ಶ್ರೇಯಸ್, ಪೀಣ್ಯದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಪೋಷಕರು ಬೆಳಿಗ್ಗೆ ಕೋಣೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಶ್ರೇಯಸ್ ಬರೆದಿಟ್ಟಿರುವ ಪತ್ರ: ‘ನನ್ನ ಹಾಜರಾತಿ ಶೇ 75ಕ್ಕಿಂತ ಕಡಿಮೆ ಇದೆ ನಿಜ. ಅದಕ್ಕೆ ಹಲವು ಕಾರಣಗಳಿವೆ. ಬೆಳಿಗ್ಗೆ 8.30ಕ್ಕೇ ಮೊದಲ ತರಗತಿ ಶುರುವಾಗುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಆ ಸಮಯಕ್ಕೆ ಕಾಲೇಜು ತಲುಪಲು ಆಗುತ್ತಿರಲಿಲ್ಲ. ಹತ್ತು ನಿಮಿಷ ತಡವಾಗಿ ಹೋದರೂ ಪ್ರಾಧ್ಯಾಪಕರು ತರಗತಿಗೆ ಸೇರಿಸುತ್ತಿರಲಿಲ್ಲ’ ಎಂದು ಶ್ರೇಯಸ್ ಪತ್ರ ಬರೆದಿಟ್ಟಿದ್ದಾರೆ.

ADVERTISEMENT

‘ಅಕ್ಟೋಬರ್ ತಿಂಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೆ. ಹಾಗಾಗಿ, ಆ ತಿಂಗಳು ಕಾಲೇಜಿಗೆ ಹೋಗಿರಲಿಲ್ಲ. ಯೋಜನಾ ವರದಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುವಂತೆ ಸಹಪಾಠಿಗಳಿಗೆ ಕೇಳಿಕೊಂಡರೆ, ಯಾರೊಬ್ಬರೂ ನೆರವಿಗೆ ಬರಲಿಲ್ಲ. ಈ ಎಲ್ಲ ಕಾರಣಗಳಿಂದ ಬೇಸತ್ತಿದ್ದೇನೆ.’

‘ಶೇ 75ರಷ್ಟು ಹಾಜರಾತಿ ಇಲ್ಲದ ಕಾರಣ ಕಾಲೇಜು ಆಡಳಿತ ಮಂಡಳಿಯವರು ಪರೀಕ್ಷೆಗೆ ಪ್ರವೇಶ ಪತ್ರ ಕೊಡಲಿಲ್ಲ. ₹ 7.5 ಸಾವಿರ ದಂಡ ಕಟ್ಟಿದರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದರು. ಆದರೆ, ಹಾಜರಾತಿ ಕಡಿಮೆ ಆಗಲು ನಾನು ಕೊಟ್ಟ ಕಾರಣಗಳು ಸರಿಯಾಗಿಯೇ ಇದ್ದುದರಿಂದ ದಂಡ ಕಟ್ಟಲು ಒಪ್ಪಲಿಲ್ಲ. ಎಷ್ಟೇ ಮನವೊಲಿಸಲು ಯತ್ನಿಸಿದರೂ ಆಡಳಿತ ಮಂಡಳಿಯವರ ಮನಸ್ಸು ಕರಗಲಿಲ್ಲ. ಈ ಕಾಲೇಜಿಗೆ ಸೇರಿದ್ದೇ ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಎನಿಸುತ್ತಿದೆ’ ಎಂದೂ ಹೇಳಿದ್ದಾರೆ.

‘ಎರಡು ದಿನಗಳ ಹಿಂದೆ ಸಹಪಾಠಿಯೊಬ್ಬಳ ಜತೆ ಜಗಳ ಮಾಡಿಕೊಂಡಿದ್ದೇನೆ. ಅದೇ ಕಾರಣಕ್ಕೆ ಸಾಯುತ್ತಿದ್ದೇನೆ ಎಂದು ಯಾರೂ ಭಾವಿಸಬೇಡಿ. ನನ್ನ ಸಾವಿಗೆ ಆಕೆ ಕಾರಣಳಲ್ಲ. ಅಜ್ಜಿ ಹಾಗೂ ಅಮ್ಮ ನಿಮಗೆ ಕ್ಷಮೆ ಕೋರುತ್ತೇನೆ’ ಎಂದು ಶ್ರೇಯಸ್ ಪತ್ರದಲ್ಲಿ ವಿವರಿಸಿದ್ದಾರೆ.

‘ಕಾಲೇಜಿನ ತಪ್ಪಿಲ್ಲ’

‘ಕಾಲೇಜಿನವರು ಆಡಳಿತ ಮಂಡಳಿಯ ನಿಯಮಗಳನ್ನು ಪಾಲಿಸಿದ್ದಾರೆ ಅಷ್ಟೇ. ಇದರಲ್ಲಿ ಅವರ ತಪ್ಪೇನು ಇಲ್ಲ’ ಎಂದು ಶ್ರೇಯಸ್‌ನ ಪೋಷಕರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಗಜೀವನ್‌ರಾಮನಗರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.