ವಿದೇಶಿ ಅಧ್ಯಯನ ಮೇಳಕ್ಕೆ ಭರಪೂರ ಸ್ಪಂದನೆ
ಬೆಂಗಳೂರು: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದುವ ಅವಕಾಶ ದೊರೆತರೆ ಯಾರಿಗೆ ಬೇಡ ಹೇಳಿ. ಪ್ರತಿ ಕುಟುಂಬಕ್ಕೂ, ಪ್ರತಿ ವಿದ್ಯಾರ್ಥಿಗೂ ಅಂಥದ್ದೊಂದು ಬಯಕೆ ಒಂದಲ್ಲ ಒಮ್ಮೆ ಕಾಡಿರಲೂ ಸಾಕು. ಕೌಶಲಾಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ನಗರದಲ್ಲಿ ಆಯೋಜಿಸಿದ್ದ ‘ವಿದೇಶದಲ್ಲಿ ಅಧ್ಯಯನ ಮೇಳ’ವು ರಾಜ್ಯದ ವಿದ್ಯಾರ್ಥಿಗಳಿಗೆ ಅಂಥದ್ದೊಂದು ವೇದಿಕೆ ಒದಗಿಸಿಕೊಟ್ಟಿತ್ತು.
ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಅಮೆರಿಕ, ಆಸ್ಟ್ರೇಲಿಯ, ಜರ್ಮನಿ, ಬ್ರಿಟನ್‌ನ ಹಲವು ವಿಶ್ವವಿದ್ಯಾಲಯಗಳೂ ಸೇರಿ ಜಾಗತಿಕ ಮಟ್ಟದ 65 ಶೈಕ್ಷಣಿಕ ಸಂಸ್ಥೆಗಳು ಭಾಗಿಯಾಗಿದ್ದವು. ಈ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನದ ಅವಕಾಶಗಳ ಬಗ್ಗೆ ಪರಿಶೀಲಿಸಲು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪೋಷಕರ ಜತೆಗೆ ಮೇಳಕ್ಕೆ ಬಂದಿದ್ದರು.
ಮೇಳವು ಬೆಳಿಗ್ಗೆ 10ಕ್ಕೆ ಆರಂಭವಾಗಲಿತ್ತಾದರೂ, 9 ಗಂಟೆಯ ಹೊತ್ತಿಗೇ ಸಾವಿರಾರು ವಿದ್ಯಾರ್ಥಿಗಳು ನೋಂದಣಿಗೆ ಸರದಿಯಲ್ಲಿ ನಿಂತಿದ್ದರು. ಈ ಮೊದಲೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದ 5 ಸಾವಿರ ವಿದ್ಯಾರ್ಥಿಗಳು ಮತ್ತು ಸ್ಥಳದಲ್ಲೇ ನೋಂದಣಿ ಮಾಡಿಸಿದ 5,000 ಮಂದಿ ಮೇಳಕ್ಕೆ ಕಳೆ ತಂದರು.
ಕೆವಿಟಿಎಸ್‌ಡಿಸಿ ಮೂಲಕ ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವುದಾಗಿ ಹಲವು ವಿಶ್ವವಿದ್ಯಾಲಯಗಳು ಮೇಳದಲ್ಲಿಯೇ ಘೋಷಿಸಿದವು. ಯೂನಿರ್ವಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾವು ಪದವಿ ವಿದ್ಯಾರ್ಥಿಗಳಿಗೆ 48,000 ಆಸ್ಟ್ರೇಲಿಯನ್ ಡಾಲರ್, ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ 24,000 ಆಸ್ಟ್ರೇಲಿಯನ್ ಡಾಲರ್, ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ ಶುಲ್ಕದಲ್ಲಿ ಶೇ 50ರಷ್ಟು, ಬಾಂಗೋರ್ ಯೂನಿರ್ವಸಿಟಿಯು ಶುಲ್ಕದಲ್ಲಿ ಶೇ 50ರಷ್ಟು ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿದವು.
‘ಬಹುತೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ ಮತ್ತು ಫಾರ್ಮಸಿ ಕೋರ್ಸ್‌ಗಳ ಬಗ್ಗೆ ವಿವರಣೆ ಪಡೆದರು. ವಿದ್ಯಾರ್ಥಿವೇತನ, ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ಪಡೆದರು’ ಎಂದು ಅಮೆರಿಕದ ನಾರ್ತ್ ಟೆಕ್ಸಾಸ್ ಯೂನಿವರ್ಸಿಟಿಯ ಪ್ರತಿನಿಧಿ ಗೀತಾ ಕುರುಬ ಹೇಳಿದರು.
ಮೇಳದ ಅಂತ್ಯದ ವೇಳೆಗೆ ಕೌಶಲಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದರು. ಇಂತಹ ಮೇಳಗಳನ್ನು ಮತ್ತಷ್ಟು ನಡೆಸುವಂತೆ, ರಾಜ್ಯ ಸರ್ಕಾರದಿಂದಲೂ ವಿದ್ಯಾರ್ಥಿ ವೇತನ ಒದಗಿಸುವಂತೆ ವಿದ್ಯಾರ್ಥಿಗಳು ಕೋರಿದರು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮೂವರು ಸಚಿವರೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.