ADVERTISEMENT

ಉಪನಗರ ರೈಲು ಯೋಜನೆ ಮೊತ್ತ ಹೆಚ್ಚಳ?

​ಪ್ರಜಾವಾಣಿ ವಾರ್ತೆ
Published 19 ಮೇ 2019, 20:05 IST
Last Updated 19 ಮೇ 2019, 20:05 IST
   

ಬೆಂಗಳೂರು: ಉಪನಗರ ರೈಲು ಯೋಜನೆಗೆ ಉಚಿತವಾಗಿ ಭೂಮಿ ಒದಗಿಸುವ ಭರವಸೆಯನ್ನು ಪ್ರಧಾನ ಮಂತ್ರಿ ಕಚೇರಿ ಹಿಂದಕ್ಕೆ ಪಡೆದಿದ್ದು, ‘ಗುತ್ತಿಗೆ ಮೊತ್ತ ಕೂಡಯೋಜನಾ ವೆಚ್ಚದ ಭಾಗ’ ಎಂದು ಹೇಳಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಹೊರೆಯಾಗಲಿದೆ.

ಖಾಸಗಿ ಸಹಭಾಗಿತ್ವದ(ಪಿಪಿಪಿ) ಮಾದರಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ.ಇದರಿಂದಾಗಿ ₹22,242 ಕೋಟಿ ಮೊತ್ತದ ಉಪನಗರ ರೈಲು ಯೋಜನೆಯ ಸಮಗ್ರ ಯೋಜನಾ ವರದಿ ಮತ್ತೊಮ್ಮೆ ಪರಿಷ್ಕರಣೆ ಆಗಬೇಕಿದೆ. 36 ವರ್ಷಗಳ ಹಿಂದೆ(1983) ಮೊದಲ ಬಾರಿಗೆ ಚರ್ಚೆಗೆ ಬಂದ ಯೋಜನೆ ಇದಾಗಿದ್ದು, ಪ್ರಧಾನ ಮಂತ್ರಿ ಕಚೇರಿಯ ಈ ಪತ್ರದಿಂದ ಇನ್ನೂ ಒಂದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ.

‘ಯೋಜನೆ ಪರಿಷ್ಕರಣೆಯಿಂದ ಆಗಲಿರುವ ಹಣಕಾಸು ವ್ಯತ್ಯಾಸದ ಹೊಂದಾಣಿಕೆಯನ್ನು ಸರಿಪಡಿಸಬೇಕು. ಪಿಪಿಪಿಯಲ್ಲಿ ಯೋಜನೆಯ ಇಂಚಿಂಚಿನ ಮಾಹಿತಿಯು ಇರಬೇಕು’ ಎಂದು ರೈಲ್ವೆ ಮಂಡಳಿಯು ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ(ಕೆ-ರೈಡ್) ಏಪ್ರಿಲ್ 10ರಂದು ಬರೆದಿರುವ ಪತ್ರದಲ್ಲಿ ತಿಳಿಸಿದೆ. ಪ್ರಧಾನ ಮಂತ್ರಿ ಕಚೇರಿಯ ನಿರ್ದೇಶನಂತೆಈ ಪತ್ರ ಬರೆಯಲಾಗಿದೆ ಎಂದೂ ಹೇಳಿದೆ.

ADVERTISEMENT

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಫೆಬ್ರುವರಿಯಲ್ಲಿ ಸಭೆ ನಡೆಸಿದ್ದ ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್‌, ನಂತರ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಬೇಡಿಕೆಯಂತೆ ಉಚಿತವಾಗಿ ಭೂಮಿ ಒದಗಿಸುವ ಭರವಸೆ ನೀಡಿದ್ದರು.‘ಈ ಭೂಮಿಗೆ ಸಾಂಕೇತಿಕವಾಗಿ 1 ರೂಪಾಯಿಯನ್ನು ವಾರ್ಷಿಕ ಗುತ್ತಿಗೆ ಮೊತ್ತವಾಗಿ ಪಡೆಯುತ್ತೇವೆ’ ಎಂದಿದ್ದರು.

ಇದರಿಂದಾಗಿ ₹6,700 ಕೋಟಿ ಮೌಲ್ಯದ717 ಎಕರೆ ಭೂಮಿ ಉಚಿತವಾಗಿ ದೊರೆತಂತಾಗಿತ್ತು. ಯೋಜನಾ ಮೊತ್ತ ಕಡಿಮೆ
ಯಾಗಲಿದೆ ಎಂದೂ ರಾಜ್ಯ ಸರ್ಕಾರ ಅಂದಾಜಿಸಿತ್ತು.

‘ಭೂಮಿಯ ಮೌಲ್ಯಕ್ಕೆ ಹೋಲಿಸಿದರೆ ಗುತ್ತಿಗೆ ಮೊತ್ತ ಅತ್ಯಂತ ಕಡಿಮೆಯಾಗಲಿದೆ. ಬೇರೆ ಯೋಜನೆಗಳಲ್ಲಿ ರೈಲ್ವೆ ಮಂಡಳಿ ಭೂಮಿಯ ಮೌಲ್ಯದ ಶೇ 6ರಿಂದ ಶೇ 10ರಷ್ಟನ್ನು ಮಾತ್ರ ಗುತ್ತಿಗೆ ಮೊತ್ತವಾಗಿ ಪಡೆದಿದೆ. ಅಂದರೆ ಈ ಯೋಜನೆಗೆ ಅಂದಾಜು ₹ 500 ಕೋಟಿ ಆಗಬಹುದು’ ಎಂದು ಸ್ಥಳೀಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

ನಗರದ ಹೊರಕ್ಕೆ ಸಂಪರ್ಕ

‘ಉಪನಗರ ರೈಲು ಯೋಜನೆಯು ಮೆಟ್ರೊ ರೈಲಿಗೆ ಪ್ರತಿಸ್ಪರ್ಧಿಯಲ್ಲ. ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ ಮೆಟ್ರೊ ಮತ್ತು ಬಸ್‌ ಸೇವೆ ಇರಲಿ’ ಎಂದೂ ಪ್ರಧಾನಿ ಕಚೇರಿ ನಿರ್ದೇಶನ ನೀಡಿದೆ.

‘‌ತುಮಕೂರು, ರಾಮನಗರ, ಕೋಲಾರ ಮತ್ತು ಇತರ ನಗರಗಳನ್ನು ಸಂಪರ್ಕ ಕಲ್ಪಿಸಲು ಬೇಕಿರುವ ಭೂಮಿಯ ಅಗತ್ಯದ ಬಗ್ಗೆ ಸಮಗ್ರ ಸಮೀಕ್ಷೆ ಮತ್ತು ವಿಸ್ತೃತ ಅಂದಾಜು ವೆಚ್ಚದ ಕುರಿತು ವರದಿ ತಯಾರಿಸಿ ಹೊಸ ಪ್ರಸ್ತಾವನೆ ಸಲ್ಲಿಸಲು ಕೆ-ರೈಡ್‌ಗೆ ಒಂದು ವರ್ಷ ಬೇಕಾಗಬಹುದು’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.