ಬೆಂಗಳೂರು: ಬೆಂಗಳೂರನ್ನು ಹಸಿರಾಗಿಸುವ ನಿಟ್ಟಿನಲ್ಲಿ ನಗರ ಕೃಷಿಗೆ ಸಂಬಂಧಿಸಿದ ನೀತಿಯನ್ನು ರೂಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಶಾಸಕ ರಿಜ್ವಾನ್ ಅರ್ಷದ್ ಅವರು ಕೃಷಿ ತಂತ್ರಜ್ಞರ ಸಂಸ್ಥೆಗೆ ಸಲಹೆ ನೀಡಿದರು.
ಕೃಷಿ ತಂತ್ರಜ್ಞರ ಸಂಸ್ಥೆ ಆಯೋಜಿಸಿದ್ದ ‘ಹಸಿರು ಬೆಂಗಳೂರು: ಸುಸ್ಥಿರ ಜೀವನಕ್ಕಾಗಿ ಉದ್ಯಾನ ನಗರಿಯ ಪುನಶ್ಚೇತನ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಸಿರು ಬೆಂಗಳೂರು ಕುರಿತು ಆಯೋಜಿಸಿರುವ ಕಾರ್ಯಾಗಾರ ಸಕಾಲಿಕವಾಗಿದೆ. ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ ಪ್ರತಿಯೊಬ್ಬರೂ ವೈಯಕ್ತಿಕವಾಗಿ ತಮ್ಮ ಮನೆಗಳ ಅಂಗಳದಲ್ಲಿ ಗಿಡಗಳನ್ನು ಬೆಳೆಸಿದರೆ, ನಗರ ಹಸಿರಾಗುತ್ತದೆ. ಈ ಬಗ್ಗೆ ನಗರವಾಸಿಗಳಿಗೆ ಇನ್ನೂ ಹೆಚ್ಚಿನ ತಿಳಿವಳಿಕೆ ಮೂಡಿಸಿ. ಪ್ರತಿ ತಿಂಗಳೂ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ’ ಎಂದರು.
ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಮಾತನಾಡಿ, ‘ನಗರ ಹಾಗೂ ನಗರದ ಅಂಚಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ನಿಯಮಾವಳಿಗಳನ್ನು ಸರ್ಕಾರ ರೂಪಿಸಬಹುದು’ ಎಂದು ಹೇಳಿದರು.
ನಂತರ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಹೆಗಡೆ, ‘ನಗರವಾಸಿಗಳಿಗೆ ಹಸಿರು ಜೀವನ ಪದ್ಧತಿಗಳು’ ವಿಷಯದ ಕುರಿತು ವಿಚಾರ ಮಂಡಿಸಿದರು. ನಂತರ ಮನೆಯ ತ್ಯಾಜ್ಯದಿಂದ ಕೈತೋಟಕ್ಕೆ ಅಗತ್ಯವಾದ ಕಾಂಪೋಸ್ಟ್ ತಯಾರಿಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಪಡಿಸಿದರು.
ವಿಜ್ಞಾನಿ ಚಂದ್ರಶೇಖರ ಬಿರಾದಾರ ಅವರು, ‘ಬೆಂಗಳೂರಿನ ಹಸಿರೀಕರಣ ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸುವ ಕ್ರಮಗಳು’ ಕುರಿತು ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ನಗರದ ವಿವಿಧ ಭಾಗಗಳ ನಿವಾಸಿಗಳು ಪಾಲ್ಗೊಂಡಿದ್ದರು. ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎ.ಬಿ.ಪಾಟೀಲ ಮಾತನಾಡಿದರು. ಕಾರ್ಯಕ್ರಮ ಸಮಿತಿಯ ಮುಖ್ಯಸ್ಥ ಎಸ್.ಬಿ.ಯೋಗಾನಂದ, ಐಎಟಿ ಕಾರ್ಯದರ್ಶಿ ಯೋಗೇಶ್ ಜಿ.ಎಚ್. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.