ADVERTISEMENT

ಸುಬ್ರಹ್ಮಣ್ಯಪುರ-ಬೇಗೂರು: ಕೆರೆ ಒತ್ತುವರಿ ತೆರವಿಗೆ ತಿಂಗಳ ಗಡುವು

ಸುಬ್ರಹ್ಮಣ್ಯಪುರ-ಬೇಗೂರು ಕೆರೆಗಳ ಒತ್ತುವರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 19:35 IST
Last Updated 20 ಜುಲೈ 2022, 19:35 IST
   

ಬೆಂಗಳೂರು: ‘ಸುಬ್ರಹ್ಮಣ್ಯಪುರ ಹಾಗೂ ಬೇಗೂರು ಕೆರೆ ಒತ್ತುವರಿ ಪ್ರದೇಶವನ್ನು 10 ದಿನಗಳ ಒಳಗಾಗಿ ಸಮೀಕ್ಷೆ ನಡೆಸಿ, ಒತ್ತುವರಿದಾರ
ರಿಗೆ ನೋಟಿಸ್ ನೀಡಿ ತೆರವುಗೊಳಿ ಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ನ್ಯಾಯಪೀಠ ಈ ಹಿಂದಿನ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನ ದಂತೆ ಸುಬ್ರಹ್ಮಣ್ಯಪುರ ಹಾಗೂ ಬೇಗೂರು ಕೆರೆಗೆ ಸಂಬಂಧಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳು ಖುದ್ದು ಹಾಜರಿದ್ದರು. ಅಧಿಕಾರಿಗಳ ಕಾರ್ಯವೈಖರಿ ಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, 'ಕೆರೆ ಒತ್ತುವರಿ ತೆರವುಗೊಳಿಸುವ ವಿಷಯದಲ್ಲಿ ನೀವು ಕೋರ್ಟ್ ಆದೇಶಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಿಮ್ಮನ್ನು ಅಮಾನತುಗೊಳಿಸಲು ಆದೇಶ ಮಾಡಬೇಕಾಗುತ್ತದೆ' ಎಂದು ಎಚ್ಚರಿಸಿತು.

ADVERTISEMENT

‘ನೀವು ಕೇಳಿರುವಂತೆ ಮೂರು ತಿಂಗಳು ಸಮಯ ನೀಡಲಾಗದು. ಎಲ್ಲ ಕಾರ್ಯಗಳೂ ಒಂದು ತಿಂಗಳಲ್ಲಿ ಮುಗಿಯಬೇಕು. ಹತ್ತು ದಿನಗಳಲ್ಲಿ ಸಮೀಕ್ಷಾ ಕಾರ್ಯ ಮುಗಿಸಿ. ಅದಕ್ಕೆ ಎಷ್ಟು ತಹಶೀಲ್ದಾರ್, ಸಿಬ್ಬಂದಿ ಹಾಗೂ ಪೊಲೀಸ್ ನೆರವು ಅಗತ್ಯವಿದೆಯೋ ಅಷ್ಟನ್ನು ಸರ್ಕಾರ ಒದಗಿಸಬೇಕು’ ಎಂದು ಆದೇಶಿಸಿತು.

ಇದೇ ವೇಳೆ 'ಬೇಗೂರು ಮತ್ತು ಸುಬ್ರಹ್ಮಣ್ಯಪುರ ಕೆರೆಗಳ ಸುತ್ತ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಕೆರೆಗೆ ಧಕ್ಕೆ ಆಗಲಿದೆ' ಎಂದು ಅರ್ಜಿದಾರರ ಪರ ವಕೀಲರೊಬ್ಬರು ಆರೋಪಿಸಿದರು.

ಇದನ್ನು ತಳ್ಳಿ ಹಾಕಿದ ಬಿಬಿಎಂಪಿ ಪರ ವಕೀಲರು, ‘ಕೆರೆಯ ಸುತ್ತ ಸಂಚಾರ ಮಾದರಿಯ ಪಥವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಸಿಮೆಂಟ್, ಮರಳು ಬಳಸು ತ್ತಿಲ್ಲ. ಕೇವಲ ಕೆರೆಯ ಹೂಳನ್ನು ಸುರಿಯಲಾಗುತ್ತಿದೆ. ಈ ಪಥದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕೇವಲ ಕೆರೆಗಳ ನಿರ್ವಹಣೆಗಷ್ಟೇ ಇದು ಮೀಸಲಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.