ADVERTISEMENT

ಉಪನಗರ ರೈಲು| ಕೆಲಸ ಆರಂಭಕ್ಕೇ ಕನಿಷ್ಠ ₹1 ಸಾವಿರ ಕೋಟಿ ಬೇಕು

ಸಿಸಿಇಎ ಅನುಮೋದನೆ ಬಗ್ಗೆ ಶಂಕೆ ಬೇಡ - ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 20:18 IST
Last Updated 8 ಫೆಬ್ರುವರಿ 2020, 20:18 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ಉಪನಗರ ರೈಲು ಯೋಜನೆಗೆ ಪಿಂಕ್‌ ಬುಕ್‌ನಲ್ಲಿ ₹1 ಕೋಟಿ ಮೀಸಲಿಟ್ಟಿದ್ದರೂ, ‘ಈ ವರ್ಷವೇ ಕಾಮಗಾರಿ ಆರಂಭವಾಗುವ ಬಗ್ಗೆ ಅನುಮಾನ ಬೇಡ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ. ಆದರೆ, ಯೋಜನೆ ಆರಂಭಿಸಲು ಕನಿಷ್ಠ ₹1 ಸಾವಿರ ಕೋಟಿ ಅನುದಾನ ಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

‘ಹಿಂದಿನ ರಾಜ್ಯ ಸರ್ಕಾರ ಏನೂ ಮಾಡದಿದ್ದರಿಂದ ವಿಳಂಬವಾಗಿದೆ. ಈಗ ಪ್ರಕ್ರಿಯೆಗೆ ವೇಗ ದೊರೆತಿದೆ. ಪಿಂಕ್ ಬುಕ್‍ನಲ್ಲಿ ನೀಡಿರುವ ಹಣ ಟೋಕನ್ ಅಡ್ವಾನ್ಸ್ ಅಷ್ಟೇ’ ಎಂದು ಸುರೇಶ್ ಅಂಗಡಿ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ(ಸಿಸಿಇಎ) ಅನುಮೋದನೆ ಯಾವಾಗ ಎಂಬ ಪ್ರಶ್ನೆಗೆ ‘ನಿಮಗೇಕೆ ಅನುಮಾನ’ ಎಂದಷ್ಟೇ ಉತ್ತರಿಸಿದರು.

ADVERTISEMENT

‘₹18,621 ಕೋಟಿ ಮೊತ್ತದ ಯೋಜನೆ ಆರಂಭಿಸಲು ಪ್ರಾಥಮಿಕವಾಗಿ ಕನಿಷ್ಠ ₹1 ಸಾವಿರ ಕೋಟಿ ಬೇಕಿದೆ. ಇಷ್ಟು ಅನುದಾನ ದೊರೆತರೆ ಶೇ 50ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿಯಲಿದೆ. ಅಲ್ಲದೇ ಶೇ 5ರಷ್ಟು ಕಾಮಗಾರಿ ಆರಂಭವೂ ಆಗಲಿದೆ’ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ–ರೈಡ್‌) ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗರ್ಗ್ ಹೇಳಿದರು.

ವಿದ್ಯುದ್ದೀಕರಣಗೊಂಡಿರುವ ಉತ್ತರ ಪ್ರದೇಶದ ಚುನಾರ್‌ನಿಂದ ಚೋಪನ್ ವರೆಗಿನ 100 ಕಿ.ಮೀ ರೈಲು ಮಾರ್ಗಕ್ಕೆ ಸುರೇಶ್ ಅಂಗಡಿ ಅವರು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ವಿಡಿಯೊ ಕಾನರೆನ್ಸ್ ಮೂಲಕ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.