ಬೆಂಗಳೂರು: ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣಕ್ಕೆ ಸೋಮವಾರ ರಾತ್ರಿ ಪ್ರಯಾಣಿಕರ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಭದ್ರತಾ ತಪಾಸಣೆಗೆ ಒಳಪಡಲು ನಿರಾಕರಿಸಿ ಸದ್ದಿಲ್ಲದೇ ಕಾಲ್ಕಿತ್ತಿದ್ದಾನೆ. ಆತನ ಅನುಮಾನಾಸ್ಪದ ನಡೆ ಆತಂಕಕ್ಕೆ ಕಾರಣವಾಗಿದೆ.
‘ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯು ಆತ್ಮಾಹುತಿ ಬಾಂಬರ್ ಆಗಿರಬಹುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದು, ನಗರದ ಎಲ್ಲ ಮೆಟ್ರೊ ನಿಲ್ದಾಣಗಳಲ್ಲೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ನಡೆದದ್ದೇನು?
ಜುಬ್ಬಾ ಹಾಗೂ ಕಪ್ಪು ಕೋಟು ಧರಿಸಿದ್ದ ಗಡ್ಡಧಾರಿ ಮಧ್ಯವಯಸ್ಕನೊಬ್ಬ ಸೋಮವಾರ ರಾತ್ರಿ 7.18ಕ್ಕೆ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದ ಉತ್ತರ ದ್ವಾರದ ಮೂಲಕ ಪ್ರವೇಶಿಸಿದ್ದಾನೆ. ಆತ ಒಳಗೆ ಬರುತ್ತಿದ್ದಂತೆಯೇ ಲೋಹ ಶೋಧಕ ಯಂತ್ರದ ಕೆಂಪು ದೀಪ ಉರಿದು, ಒಂದೇ ಸಮನೆ ‘ಬೀಪ್...’ ಸದ್ದು ಮೊಳಗಲಾರಂಭಿಸಿತ್ತು. ಎಚ್ಚೆತ್ತ ಭದ್ರತಾ ಸಿಬ್ಬಂದಿ ಹೆಚ್ಚಿನ ತಪಾಸಣೆ ನಡೆಸಲು ಮುಂದಾದಾಗ ಆತ ಏನನ್ನೋ ಹುಡುಕುವ ನೆಪದಲ್ಲಿ ನಿಧಾನವಾಗಿ ನಿಲ್ದಾಣದಿಂದ ಹೊರ ನಡೆದಿದ್ದಾನೆ. ಈ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮರಳಿ ಯತ್ನ: ‘ನಿಲ್ದಾಣದ ಉತ್ತರ ದ್ವಾರದಿಂದ ಪ್ರವೇಶಿಸುವ ಪ್ರಯತ್ನ ವಿಫಲವಾದ ಬಳಿಕ ಆ ವ್ಯಕ್ತಿಯು 15 ನಿಮಿಷಗಳ ಬಳಿಕ ಪಶ್ಚಿಮ ದ್ವಾರ ಬಳಿ ಕಾಣಿಸಿಕೊಂಡಿದ್ದ. ಆತನ ವರ್ತನೆ ಬಗ್ಗೆ ಸಿಬ್ಬಂದಿಗೆ ಸಂದೇಹ ಉಂಟಾಗಿದ್ದರಿಂದ ಅಲ್ಲಿಂದಲೂ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದ ಆಟೊರಿಕ್ಷಾ ಚಾಲಕರು ಹಾಗೂ ಭದ್ರತಾ ಸಿಬ್ಬಂದಿ ಹಿಡಿಯಲು ಯತ್ನಿಸಿದ್ದಾರೆ. ಆಗ ಮೆಟ್ರೊ ನಿಲ್ದಾಣದಿಂದ ನಗರ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗದ ಮೂಲಕ ಓಡಿ ತಪ್ಪಿಸಿಕೊಂಡಿದ್ದಾನೆ’ ಎಂದು ಬಿಎಂಆರ್‌ಸಿಎಲ್ ಸಿಬ್ಬಂದಿಯೊಬ್ಬರು ತಿಳಿಸಿದರು.
ಈ ಬೆಳವಣಿಗೆ ಬಗ್ಗೆ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಲೆಮರೆಸಿಕೊಂಡ ವ್ಯಕ್ತಿಗಾಗಿ ಶೋಧ ಮುಂದುವರಿಸಿದ್ದಾರೆ.
‘ಕೊಲಂಬೊದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟದ ಬಳಿಕ ಭದ್ರತಾ ತಪಾಸಣೆ ಬಗ್ಗೆ ನಾವು ಅತ್ಯಂತ ಎಚ್ಚರ ವಹಿಸುತ್ತಿದ್ದೇವೆ. ವ್ಯಕ್ತಿಯ ವರ್ತನೆ ಸಂದೇಹದಿಂದ ಕೂಡಿತ್ತು. ಹಾಗಾಗಿ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ನಿನ್ನೆ ರಾತ್ರಿಯೇ ಬಂದು ತಪಾಸಣೆ ನಡೆಸಿದ್ದಾರೆ’ ಎಂದು ನಿಗಮದಅಧಿಕಾರಿಯೊಬ್ಬರು ತಿಳಿಸಿದರು.
ಐಎಸ್‌ಡಿ ತಪಾಸಣೆ
ರಾಜ್ಯ ಆಂತರಿಕ ಭದ್ರತಾ ದಳದ (ಐಎಸ್‌ಡಿ) ಅಧಿಕಾರಿಗಳು,ಮೆಜೆಸ್ಟಿಕ್ ಮೆಟ್ರೊ ನಿಲ್ದಾಣಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ತಪಾಸಣೆ ನಡೆಸಿದರು. ಅನುಮಾನಾಸ್ಪದ ವ್ಯಕ್ತಿಯ ಚಹರೆ ಹಾಗೂ ವರ್ತನೆ ಬಗ್ಗೆ ನಿಲ್ದಾಣದ ಭದ್ರತಾ ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು.
ವಿಶೇಷ ತಂಡ ರಚನೆ: ಘಟನೆ ಬಗ್ಗೆ ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ, ‘ಸಂಶಯಾಸ್ಪದ ವ್ಯಕ್ತಿಯನ್ನು ಪತ್ತೆ ಮಾಡಲು ಚಿಕ್ಕಪೇಟೆ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.
‘ಆ ವ್ಯಕ್ತಿ ಯಾರು, ಎಲ್ಲಿಂದ ಬಂದಿದ್ದ, ಎಲ್ಲಿಗೆ ಹೋದ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ನಗರದ ಶಾಪಿಂಗ್ ಮಾಲ್, ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ’ ಎಂದು ಕೋರಿದರು.
ಬಿಗಿ ಭದ್ರತೆಯಿಂದ ಒಳಪ್ರವೇಶಿಸಿಲ್ಲ
‘ಮೆಟ್ರೊ ನಿಲ್ದಾಣದಲ್ಲಿ ಬಿಗಿ ಭದ್ರತೆಯಿಂದಾಗಿ ವ್ಯಕ್ತಿ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಭದ್ರತಾ ತಪಾಸಣೆಗೆ ಒಳಗಾಗದೇ ಯಾರೊಬ್ಬರೂ ನಿಲ್ದಾಣ ಪ್ರವೇಶಿಸಲು ಸಾಧ್ಯವಿಲ್ಲ. ನಿನ್ನೆ ನಡೆದ ಈ ಬೆಳವಣಿಗೆ ಬಳಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ವಚ್ಛತಾ ಸಿಬ್ಬಂದಿ ಸಹಾಯ ಕೇಳಿದ್ದ
ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯು ಮೆಟ್ರೊ ನಿಲ್ದಾಣ ಪ್ರವೇಶಿಸುವ ಮುನ್ನ ಸ್ವಚ್ಛತೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರನ್ನು ಮಾತನಾಡಿಸಿದ್ದಾನೆ.
‘ನಿನಗೆ ಹಣ ನೀಡುತ್ತೇನೆ. ನಾನು ಹೇಳಿದ ಕೆಲಸ ಮಾಡಿಕೊಡುತ್ತೀಯಾ’ ಎಂದು ವ್ಯಕ್ತಿ ಹೇಳಿದ್ದಾಗಿ ಆ ಮಹಿಳೆಯು ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
‘ಏನು ಕೆಲಸ ಮಾಡಿಕೊಡಬೇಕು ಎಂದು ಕೇಳಿದಾಗ, ಅದೆಲ್ಲ ಇಲ್ಲಿ ಹೇಳಲು ಸಾಧ್ಯವಿಲ್ಲ. ನನ್ನ ಜೊತೆ ಹೊರಗೆ ಬಂದರೆ ಹೇಳುತ್ತೇನೆ ಎಂದೂ ಹೇಳಿದ್ದ ಎಂಬುದಾಗಿ ಆ ಮಹಿಳೆ ತಿಳಿಸಿದ್ದಾರೆ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.