ADVERTISEMENT

ಜಯದೇವ: ಸಿಬ್ಬಂದಿ ಸುರಕ್ಷತೆಗೆ ‘ಸುಹೃದ್’ ಆ್ಯಪ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 21:36 IST
Last Updated 18 ಡಿಸೆಂಬರ್ 2024, 21:36 IST
‘ಸುಹೃದ್’ ಆ್ಯಪ್
‘ಸುಹೃದ್’ ಆ್ಯಪ್   

ಬೆಂಗಳೂರು: ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಲೈಂಗಿಕ ದೌರ್ಜನ್ಯ ತಡೆ ಸಮಿತಿ (ಪಾಶ್‌) ‘ಸುಹೃದ್’ ಆ್ಯಪ್ ಅಭಿವೃದ್ಧಿಪಡಿಸಿದೆ.

ಸಂಸ್ಥೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅವರು ಆ್ಯಪ್ ಲೋಕಾರ್ಪಣೆ ಮಾಡಿದರು. ಸಂಸ್ಥೆಯ ಪಾಶ್‌ ಮುಖ್ಯಸ್ಥೆ ಪ್ರೊ. ಜಯಶ್ರೀ ಖರ್ಗೆ ನೇತೃತ್ವದಲ್ಲಿ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. 

ಆ್ಯಪ್‌ ಬಗ್ಗೆ ಮಾಹಿತಿ ನೀಡಿದ ಪ್ರೊ. ಜಯಶ್ರೀ ಖರ್ಗೆ, ‘ಸಂಸ್ಕೃತದಲ್ಲಿ ‘ಸುಹೃದ್’ ಅಂದರೆ ಒಳ್ಳೆಯ ಹೃದಯ ಎಂಬ ಅರ್ಥವಿದೆ. ಆದ್ದರಿಂದ ಆ್ಯಪ್‌ಗೆ ಈ ಹೆಸರು ಇಡಲಾಗಿದೆ. ದೇಶದ ವಿವಿಧೆಡೆ ಇತ್ತೀಚೆಗೆ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸಂಸ್ಥೆಯು ಈ ಕ್ರಮ ಕೈಗೊಂಡಿದೆ. ‘ಶೇಕ್ ಟು ಸೇಫ್ಟಿ’ ಶೀರ್ಷಿಕೆಯಡಿ ಈ ಆ್ಯಪ್ ಪರಿಚಯಿಸಿದ್ದು, ತುರ್ತು ಸಂದರ್ಭದಲ್ಲಿ ಸ್ಮಾರ್ಟ್‌ ಫೋನ್‌ ಅನ್ನು ಮೂರು ಬಾರಿ ಅಲ್ಲಾಡಿಸಿದಲ್ಲಿ ಸಂದೇಶಗಳು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರಿಗೆ ರವಾನೆಯಾಗಲಿವೆ’ ಎಂದು ಹೇಳಿದರು.

ADVERTISEMENT

‘ಆ್ಯಪ್‌ನಲ್ಲಿ ತುರ್ತು ಸಹಾಯ (ಎಸ್‌ಒಎಸ್) ಬಟನ್ ಒತ್ತುವ ಆಯ್ಕೆಯನ್ನೂ ನೀಡಲಾಗಿದೆ. ಸ್ಮಾರ್ಟ್‌ ಫೋನ್‌ ಅಲ್ಲಾಡಿಸಿದಲ್ಲಿ ಅಥವಾ ಎಸ್‌ಒಎಸ್‌ ಆಯ್ಕೆ ಒಮ್ಮೆ ಒತ್ತಿದರೂ ಜಿಪಿಎಸ್‌ ತಂತ್ರಜ್ಞಾನದ ನೆರವಿನಿಂದ ನಿಗದಿತ ಸ್ಥಳ ಸಹಿತ ತುರ್ತು ಸಂದೇಶವು ಸಂಸ್ಥೆಯ ರಕ್ಷಣಾ ಸಿಬ್ಬಂದಿ, ನಿರ್ದೇಶಕರು, ವೈದ್ಯರು ಹಾಗೂ ಸಿಬ್ಬಂದಿಗೆ ರವಾನೆಯಾಗುತ್ತದೆ. ಇದರಿಂದ ಕೂಡಲೇ ನೆರವಿಗೆ ಧಾವಿಸಲು ಸಾಧ್ಯವಾಗುತ್ತದೆ’ ಎಂದರು.  

ಡಾ.ಕೆ.ಎಸ್. ರವೀಂದ್ರನಾಥ್, ‘ವೈದ್ಯರು ಹಾಗೂ ಸಿಬ್ಬಂದಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಆ್ಯಪ್ ಪರಿಚಯಿಸಲಾಗಿದೆ. ಕರ್ತವ್ಯನಿರತ ಸಿಬ್ಬಂದಿ ಯಾವುದೇ ರೀತಿಯ ಸಮಸ್ಯೆಗೆ ಸಿಲುಕಿದಾಗ ಒಬ್ಬರಿಗೊಬ್ಬರು ನೆರವಾಗುವುದು ಆ್ಯಪ್‌ ಅಭಿವೃದ್ಧಿಯ ಹಿಂದಿನ ಉದ್ದೇಶವಾಗಿದೆ. ಈ ಕ್ರಮದಿಂದ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ, ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ’ ಎಂದು ಹೇಳಿದರು. 

ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಭಾಕರ್, ಆ್ಯಪ್ ಅಭಿವೃದ್ಧಿಗೆ ನೆರವಾಗಿದ್ದ ಡಾ. ಚಂದನಾ ಹಾಗೂ ಎಂಜಿನಿಯರ್ ನವೀನ್ ಹೆಗ್ಡೆ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.