ಬೆಂಗಳೂರು: ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಬಾಗಲೂರಿನ ಎಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ ಸಿ. ಅರುಣ್ ಆತ್ಮಹತ್ಯೆ ಪ್ರಕರಣದ ಸಂಬಂಧ ಎಂಜಿನಿಯರಿಂಗ್ ವಿಭಾಗದ ಮೂವರು ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚಿರಂತ್, ವಿಕಾಸ್‌ಗೌಡ ಹಾಗೂ ಅಮೀನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಅರುಣ್ ತಂದೆ ಚನ್ನಕೇಶ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಪುತ್ರ ಓದುತ್ತಿದ್ದ ಕಾಲೇಜಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಿಕೊಳ್ಳಲಾಗಿತ್ತು. ಆ ಗ್ರೂಪ್‌ನಲ್ಲಿ ಚಿರಂತ್, ವಿಕಾಸ್‌ಗೌಡ ಹಾಗೂ ಅಮೀನ್ ಅವರು ನನ್ನ ಮಗನ ಬಗ್ಗೆ ಕೆಟ್ಟದಾಗಿ ಮೆಸೇಜ್ ಮಾಡಿ ಅವಮಾನ ಮಾಡಿದ್ದರು. ಈ ವಿಚಾರವನ್ನು ನನ್ನ ಮಗನ ಇಬ್ಬರು ಸ್ನೇಹಿತರು ನನಗೆ ತಿಳಿಸಿದ್ದಾರೆ. ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಒಂದು ವರ್ಷದಿಂದ ವಾಟ್ಸ್‌ಆ್ಯಪ್‌ನಲ್ಲಿ ಪೀಡಿಸಿದ್ದರು. ಅವಮಾನ ತಾಳದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂಬ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ತಾಲ್ಲೂಕು ನಂದರಾಮಯ್ಯನಪಾಳ್ಯದ ನಿವಾಸಿಗಳಾದ ಚನ್ನಕೇಶವ–ತುಳಸಿ ದಂಪತಿ ಪುತ್ರ ಸಿ.ಅರುಣ್. ಅರುಣ್ ಅವರು ವಾಸ್ತುಶಿಲ್ಪ ವಿಭಾಗದಲ್ಲಿ ಓದುತ್ತಿದ್ದರು. ಹಾಸನದ ಚನ್ನಕೇಶವ ಹಾಗೂ ತುಳಸಿ ದಂಪತಿ, ಮಗನ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೋಸ್ಕರ ನಂದರಾಮಯ್ಯನಪಾಳ್ಯಕ್ಕೆ ಬಂದು ನೆಲಸಿದ್ದರು. ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಶಾಲಾ–ಕಾಲೇಜಿನಲ್ಲೂ ಉತ್ತಮ ಅಂಕ ಗಳಿಸಿ ಪ್ರತಿಭಾನ್ವಿತರಾಗಿದ್ದ ಅರುಣ್ ಅವರಿಗೆ ಬಾಗಲೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಪ್ರವೇಶ ದೊರಕಿತ್ತು. ಜುಲೈ 11ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.