ADVERTISEMENT

ಬೆಂಗಳೂರು | ಪತ್ನಿ ಆತ್ಮಹತ್ಯೆ: ಪತಿ ಬಂಧನ

ಯುವತಿಯ ಜತೆಗೆ ಸ್ನೇಹ: ಪ್ರಶ್ನಿಸಿದ್ದಕ್ಕೆ ಕಿರುಕುಳ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
ಆಸ್ಮಾ 
ಆಸ್ಮಾ    

ಬೆಂಗಳೂರು: ಹೆಬ್ಬಾಳದ ಕನಕ ನಗರದಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯನ್ನು ಹೆಬ್ಬಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಹರ್‌ ಆಸ್ಮಾ (30) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತಿ ಬಷೀರ್‌ ಉಲ್ಲಾ ಎಂಬಾತನನ್ನು ಬಂಧಿಸಲಾಗಿದೆ.  ಆರೋಪಿ ತಾಯಿ ಜಬೀನ್‌ ತಾಜ್‌, ಅಣ್ಣ ಅರ್ಷದ್ ಉಲ್ಲಾ, ಮಜರ್‌ ಖಾನ್‌, ತರ್ಬೆಜ್‌ ಖಾನ್‌, ಹರ್ಷಿಯಾ ಹಾಗೂ ನೌಷದ್‌ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಅವರನ್ನೂ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.

ಯುವತಿಯ ಜತೆಗೆ ಬಷೀರ್‌ ಉಲ್ಲಾಗೆ ಸ್ನೇಹವಿದ್ದು, ಆತನ ಕಿರುಕುಳದಿಂದಲೇ ಆಸ್ಮಾ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರ ಪೋಷಕರು ದೂರು ನೀಡಿದ್ದಾರೆ.

ADVERTISEMENT

‘ಎರಡು ವರ್ಷಗಳ ಹಿಂದೆ ಕುಟುಂಬದ ಹಿರಿಯರು ನಿಶ್ಚಯಿಸಿದಂತೆ ಆಸ್ಮಾ ಹಾಗೂ ಬಷೀರ್‌ ಉಲ್ಲಾ ಮದುವೆ ನಡೆದಿತ್ತು. ಆಸ್ಮಾ ಎಂ.ಎ ಪದವಿ ಪಡೆದಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಬಷೀರ್‌ ಕೆಲಸ ಮಾಡುತ್ತಿದ್ದ. ಯುವತಿಯ ಜತೆಗೆ ಬಷೀರ್‌ಗೆ ಸ್ನೇಹವಿತ್ತು. ಬಷೀರ್‌ ಮೊಬೈಲ್​ ಪರಿಶೀಲಿಸಿದಾಗ ಸಾಕ್ಷ್ಯಗಳು ಸಿಕ್ಕಿದ್ದವು. ಅದನ್ನು ನೋಡಿದ್ದ ಆಸ್ಮಾ ಅವರು ಪತಿಯನ್ನು ಪ್ರಶ್ನೆ ಮಾಡಿದ್ದರು. ಆಗ ಆತ ಹಲ್ಲೆ ಮಾಡಿದ್ದ’ ಎಂದು ಆಸ್ಮಾ ಪೋಷಕರು ಆರೋಪಿಸಿದ್ದಾರೆ.

‘ಆಸ್ಮಾ ಅವರ ತಂದೆ ಜಮೀರ್ ಅವರು ಸೋಮವಾರ ಬೆಳಿಗ್ಗೆ ಅಳಿಯನಿಗೆ ಕರೆ ಮಾಡಿ ಮನೆಗೆ ಬರುವಂತೆ ಕರೆದಿದ್ದರು‌. ಆದರೆ, ಬಷೀರ್ ನೇರವಾಗಿ ಹೆಬ್ಬಾಳ ಠಾಣೆಗೆ ತೆರಳಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದ. ಹೆಬ್ಬಾಳದ ಆರನೇ ಕ್ರಾಸ್‌ನಲ್ಲಿರುವ ಮನೆಗೆ ಪೋಷಕರು ತೆರಳಿ ಪರಿಶೀಲಿಸಿದಾಗ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಷೀರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.