
ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸುಮಂಗಲಿ ಸೇವಾಶ್ರಮದ ಕಾರ್ಯದರ್ಶಿ ಎಂ. ಕಾಂತಮ್ಮ ಮತ್ತು ಅಧ್ಯಕ್ಷೆ ಎಸ್.ಜಿ ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು. ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಸೇವಾ ವಿಚಾರದಲ್ಲಿ ಸುಮಂಗಲಿ ಸೇವಾಶ್ರಮ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಜಾತಿ, ಮತ, ಪಂಥವಿಲ್ಲದೆ ಹೆಣ್ಣುಮಕ್ಕಳ ಕಣ್ಣೀರು ಒರೆಸಿ, ಆಸರೆ ನೀಡಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಸುಮಂಗಲಿ ಸೇವಾಶ್ರಮದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಮತ್ತು ಕಾಂತಮ್ಮ ಅವರ ಸೇವೆಗೆ ಬೆಲೆಕಟ್ಟಲಾಗದು. ದುರ್ಬಲರಿಗೆ ಆಸರೆ ನೀಡಿ ಅಕ್ಕರೆ ತೋರಿದ್ದಾರೆ. ಆದಿವಾಸಿಗಳ ಹೆಣ್ಣುಮಕ್ಕಳಿಗೂ ಬದುಕು ಕಟ್ಟಿಕೊಟ್ಟಿದ್ದಾರೆ. ಅಲ್ಲದೇ ಎಚ್ಐವಿ ಪೀಡಿತ ಮಕ್ಕಳಿಗಾಗಿಯೇ ದೂರ ದೃಷ್ಟಿಯೋಜನೆಯನ್ನು ಸೇವಾಶ್ರಮದವರು ರೂಪಿಸಿದ್ದಾರೆ ಎಂದು ಶ್ಲಾಘಿಸಿದರು.
‘ಕೇಂದ್ರ ಸರ್ಕಾರ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡುತ್ತಿದೆ. ಇಂತಹ ಅತ್ಯುನ್ನತ ಪ್ರಶಸ್ತಿಗಳಿಗೆ ಸುಮಂಗಲಿ ಸೇವಾಶ್ರಮ ಅರ್ಹವಾಗಿದೆ. ಈ ಹಿಂದೆ ಶಿಫಾರಸುಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಾಧಕರನ್ನು ಹುಡುಕಿ, ಗುರುತಿಸಿ ಪ್ರಶಸ್ತಿ ನೀಡುವ ಪದ್ಧತಿ ಆರಂಭಿಸಿದ್ದಾರೆ. ಅತ್ಯುನ್ನತ ಪ್ರಶಸ್ತಿ ಈ ಸಂಸ್ಥೆಗೆ ಬರಲಿ’ ಎಂದು ಆಶಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ನೋವಿನಲ್ಲಿದ್ದವರ ರಕ್ಷಣೆಗೆ ಧಾವಿಸಿ ನೋವು ನಿವಾರಿಸುವುದೇ ನಿಜವಾದ ಧರ್ಮ. ಪರಿತ್ಯಕ್ತರು, ಅಬಲೆಯರು, ನಿರಾಶ್ರಿತರು ಹಾಗೂ ಮಹಿಳೆಯರಿಗೆ ಆಶ್ರಯ ಒದಗಿಸಿ, ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸುವ ಕೆಲಸವನ್ನು ಸೇವಾಶ್ರಮ ಮಾಡುತ್ತಿದೆ’ ಎಂದು ನುಡಿದರು.
ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಮೈಕೋ ಸಂಸ್ಥೆಯ ಉದ್ಯೋಗ ತೊರೆದು, ಅನಾಥ ಮಕ್ಕಳ ಸೇವೆಗೆ ಸುಶೀಲಮ್ಮ ತೊಡಗಿಸಿಕೊಂಡರು. ಈಗಾಗಲೇ ಅವರ ಆಸರೆಯಲ್ಲಿ ಬೆಳೆದ ಮಕ್ಕಳು ವೈದ್ಯರಾಗಿದ್ದಾರೆ. ವಕೀಲರಾಗಿದ್ದಾರೆ, ವಿದೇಶಗಳಲ್ಲಿ ಕೂಡ ನೆಲಸಿದ್ದಾರೆ. ಕನ್ನಡ ನಾಡಿನ ಮದರ್ ತೇರೆಸಾ’ ಎಂದು ಬಣ್ಣಿಸಿದರು.
ಅನೇಕ ಹೆಣ್ಣುಮಕ್ಕಳಿಗೆ ಸುಶೀಲಮ್ಮ ಅವರು ತಾಯಿಯಾಗಿದ್ದಾರೆ. ನಮ್ಮ ಮಠಕ್ಕೆ ಆಸರೆ ಕೇಳಿ ಬಂದ ಹೆಣ್ಣುಮಕ್ಕಳನ್ನು ಸುಮಂಗಲಿ ಸೇವಾಶ್ರಮಕ್ಕೆ ಕಳಿಸಿಕೊಟ್ಟ ನಿದರ್ಶನಗಳಿವೆ. ಅನಾಥ ಮಕ್ಕಳ ಪಾಲಿಗೆ ಈ ಆಶ್ರಮ ಕಾಮಧೇನು ಎಂದು ಶ್ಲಾಘಿಸಿದರು.
ರಾಜ್ಯಸಭಾ ಸದಸ್ಯ ಕೆ.ನಾರಾಯಣ ಅವರು ಯೋಗ ಪುಸ್ತಕ ಬಿಡುಗಡೆ ಮಾಡಿದರು. ಸಾಹಿತಿ ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್, ರಾಣಿ ಸತೀಶ್, ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಗೀತಾಂಜಲಿ ಸಂಸ್ಥೆ ಕಾರ್ಯದರ್ಶಿ ಬಿ.ಟಿ.ಮುನಿಯಪ್ಪ ಮಾತನಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.