
ಬೆಂಗಳೂರು: ಬೇಸಿಗೆಯಲ್ಲಿ ಬೇಡಿಕೆಗೆ ತಕ್ಕಂತೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡಬಾರದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೇಡಿಕೆ ಮತ್ತು ಪೂರೈಕೆ ನಡುವೆ ಸಮನ್ವಯ ಸಾಧಿಸಲು ಅಗತ್ಯವಿರುವ ವಿದ್ಯುತ್ ಉತ್ಪಾದನೆ ಮತ್ತು ಖರೀದಿಗೆ ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.
‘ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಮೂರು ತಿಂಗಳಲ್ಲಿ ವಿದ್ಯುತ್ ಬೇಡಿಕೆ ಎಷ್ಟಾಗಬಹುದು ಎಂಬುದನ್ನು ಈಗಲೇ ಲೆಕ್ಕಾಚಾರ ಮಾಡಿ ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಹಗಲು ವೇಳೆ ಸೌರ ವಿದ್ಯುತ್ ಹೇರಳವಾಗಿ ಲಭ್ಯವಿರುವುದರಿಂದ ಅದನ್ನು ಬಳಸಿಕೊಳ್ಳಬೇಕು. ರಾತ್ರಿ ವೇಳೆ ಜಲ ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಹೆಚ್ಚಿಸುವತ್ತ ಗಮನಹರಿಸಬೇಕು’ ಎಂದರು.
ಕೃಷಿಗೆ ಹಗಲು 7 ಗಂಟೆ ವಿದ್ಯುತ್
‘ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಕುಸುಮ್- ಸಿ ಯೋಜನೆಯಡಿ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದರಿಂದ ಇತರೆ ಭಾಗಗಳಲ್ಲೂ ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.
‘ಕಳೆದ ಡಿಸೆಂಬರ್ ತಿಂಗಳಲ್ಲಿ ದಾಖಲೆಯ 17,220 ಮೆಗಾವಾಟ್ ವಿದ್ಯುತ್‌ಗೆ ಬೇಡಿಕೆ ಇತ್ತು. ಅದನ್ನು ಸಮರ್ಪಕವಾಗಿ ಪೂರೈಕೆ ಮಾಡಲಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಕಳೆದ ವರ್ಷಕ್ಕಿಂತ ಶೇ 5ರಷ್ಟು ಹೆಚ್ಚು ಬೇಡಿಕೆ ಬರುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಪಿಸಿಕೆಎಲ್ (ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್) ಅಧಿಕಾರಿಗಳು ಮಾಹಿತಿ ನೀಡಿದರು.
ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಜುಲೈ ಅಂತ್ಯದವರೆಗೆ ಪ್ರತಿನಿತ್ಯ 33 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು ಎಂದು ವಿವರಿಸಿದರು.
ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್ ಸೇರಿದಂತೆ ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.
ಲಭ್ಯವಿರುವ ವಿದ್ಯುತ್ ಅನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಓವರ್ ಲೋಡ್ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.– ಗೌರವ್ ಗುಪ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇಂಧನ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.