ADVERTISEMENT

ಸುಂಕದಕಟ್ಟೆ–ಪೀಣ್ಯ: ಇಲ್ಲದ ರಸ್ತೆಯಲ್ಲಿ ಮನಸ್ಸೊಲ್ಲದೇ ಸಂಚಾರ

ಸುಂಕದಕಟ್ಟೆ–ಪೀಣ್ಯ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪ್ರಯಾಣ ದುಸ್ತರ

ವಿಜಯಕುಮಾರ್ ಎಸ್.ಕೆ.
Published 17 ಫೆಬ್ರುವರಿ 2022, 20:15 IST
Last Updated 17 ಫೆಬ್ರುವರಿ 2022, 20:15 IST
ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿ ಬಸ್‌ಗಳು ಸಾಲುಗಟ್ಟಿ ಸಂಚರಿಸುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್‌.ಜಿ.
ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿ ಬಸ್‌ಗಳು ಸಾಲುಗಟ್ಟಿ ಸಂಚರಿಸುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್‌.ಜಿ.   

ಬೆಂಗಳೂರು: ಸುಂಕದಕಟ್ಟೆಯಿಂದ ಹೆಗ್ಗನಹಳ್ಳಿ ಮೂಲಕ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಲುದಾರಿ ರೀತಿಯ ಖಾಸಗಿ ರಸ್ತೆಯಲ್ಲೇ ದಿನಕ್ಕೆ 500ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಸಂಚರಿಸಬೇಕಿದ್ದು, ಚಾಲಕರು ಮತ್ತು ಪ್ರಯಾಣಿಕರು ಹೈರಾಣಾಗಿದ್ದಾರೆ.

ಸುಂಕದಕಟ್ಟೆಯಿಂದ ಹೆಗ್ಗನಹಳ್ಳಿ ಕ್ರಾಸ್‌, ನಾಗರಹೊಳೆ ವೃತ್ತ, ಪೀಣ್ಯ ಎರಡನೇ ಹಂತ, ರಾಜಗೋಪಾಲನಗರದ ಮೂಲಕ ಜಾಲಹಳ್ಳಿ ಕ್ರಾಸ್‌ಗೆ ಸಂಪರ್ಕ ಕಲ್ಪಿಸಲು ಇರುವ ಪ್ರಮುಖ ರಸ್ತೆ ಇದಾಗಿದೆ. ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಅದರಲ್ಲೂ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಈ ರಸ್ತೆಯೇ ಸಂಪರ್ಕ ಕೊಂಡಿ. ಈ ರಸ್ತೆ ಅಭಿವೃದ್ಧಿ ವಿಷಯ ಅಕ್ಷರಶಃ ಮರೀಚಿಕೆಯಾಗಿದೆ.

ಹೆಸರಿಗೆ ಇದು ಹೆಗ್ಗನಹಳ್ಳಿ ಮುಖ್ಯ ರಸ್ತೆ. ಆದರೆ, ಮಾಗಡಿ ರಸ್ತೆಯಿಂದ ಹೊರಟರೆ ಮುಖ್ಯ ರಸ್ತೆಯ ಯಾವ ಲಕ್ಷಣವೂ ಕಾಣಿಸುವುದಿಲ್ಲ. ಬೆಟ್ಟಗುಡ್ಡಗಳ ಕಾಡು ಹಾದಿಯಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಮಾಗಡಿರಸ್ತೆಯಿಂದ ಹೆಗ್ಗನಹಳ್ಳಿ ಕ್ರಾಸ್‌ಗೆ ಸಂಪರ್ಕಿಸಲು ಇರುವುದು ಇದೊಂದೇ ರಸ್ತೆ. ಸೊಲ್ಲಾಪುರದಮ್ಮ ದೇವಸ್ಥಾನದ ಬಳಿಯಿಂದ ಹಾದು ಹೋಗುತ್ತಿದ್ದ ರಸ್ತೆಯೂ ಈಗ ಇಲ್ಲ. ದೇವಸ್ಥಾನಕ್ಕೆ ಸೇರಿರುವ ಜಾಗ ಅದಾಗಿದ್ದರಿಂದ ಅಲ್ಲಿ ದೇವಸ್ಥಾನ ತಲೆ ಎತ್ತುತ್ತಿದೆ. ಕಾಂಪೌಂಡ್‌ ಕೂಡ ನಿರ್ಮಾಣವಾಗಿದೆ. ಬಿಎಂಟಿಸಿ ಬಸ್‌ಗಳು ಸರಾಗವಾಗಿ ಸಂಚರಿಸುತ್ತಿದ್ದ ರಸ್ತೆಯಲ್ಲೀಗ ಆಟೋರಿಕ್ಷಾ ಕೂಡ ಸಂಚರಿಸುವುದು ಕಷ್ಟವಾಗಿದೆ.

ADVERTISEMENT

ಈಗ ಉಳಿದಿರುವುದು ಈ ಖಾಸಗಿ ರಸ್ತೆಯೊಂದೇ. ಕಿರಿದಾದ ರಸ್ತೆಯಲ್ಲೇ ಎರಡು ಕಡೆಯ ವಾಹನಗಳು ಕಷ್ಟದಲ್ಲಿ ಸಂಚರಿಸಬೇಕಾಗಿದೆ. ಕೆ.ಆರ್. ಮಾರುಕಟ್ಟೆ, ಬನಶಂಕರಿ, ನಾಯಂಡಹಳ್ಳಿ, ಕೆಂಗೇರಿ ಕಡೆಯಿಂದ ಬರುವ ಎಲ್ಲಾ ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಅದರ ಜತೆಗೆ ಕಾರು, ಲಾರಿ ಮತ್ತು ಬೈಕ್‌ಗಳು ಇದೇ ರಸ್ತೆಯಲ್ಲಿ ಸಾಗಬೇಕು. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಇರುವುದರಿಂದ ಖಾಸಗಿ ವಾಹನಗಳ ಸಂಚಾರವೂ ಇಲ್ಲಿ ಹೆಚ್ಚು ಇದೆ.

‘‌ಸಮರ್ಪಕ ಭೂಪರಿಹಾರ ಸಿಗದಿರುವುದರಿಂದ ರಸ್ತೆ ಅಭಿವೃದ್ಧಿಗೆ ಖಾಸಗಿ ರಸ್ತೆಯ ಮಾಲೀಕರು ಅವಕಾಶ ನೀಡುತ್ತಿಲ್ಲ. ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲೇ ವಾಹನಗಳು ಸರ್ಕಸ್ ಮಾಡುತ್ತಾ ಸಾಗುತ್ತಿವೆ. ಅತೀ ಕಿರಿದಾಗಿರುವ ಈ ರಸ್ತೆಯಲ್ಲಿ ದಟ್ಟಣೆ ಅವಧಿಯಲ್ಲಿ ಒಮ್ಮೊಮ್ಮೆ ಗಂಟೆಗಟ್ಟಲೆ ಬಸ್‌ಗಳು ನಿಂತಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ. ರಸ್ತೆ ಸ್ಥಿತಿಯನ್ನು ಕಂಡು ರೋಸಿ ಹೋಗಿರುವ ಸಂಚಾರ ಪೊಲೀಸರು ಇತ್ತ ತಲೆ ಹಾಕುವುದೇ ಇಲ್ಲ. ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕರೇ ಬಸ್‌ ಇಳಿದು ಸಂಚಾರ ಸಮಸ್ಯೆ ನಿಭಾಯಿಸಿ ಮುಂದೆ ಸಾಗಬೇಕಾದ ಅನಿವಾರ್ಯ ಇದೆ’ ಎಂದು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರು ಅಳಲು ತೋಡಿಕೊಳ್ಳುತ್ತಾರೆ.

‘ದಿನಕ್ಕೆ 500ಕ್ಕೂ ಹೆಚ್ಚು ಟ್ರಿಪ್‌ಗಳಲ್ಲಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಇಲ್ಲದ ರಸ್ತೆಯಲ್ಲಿ ಒಲ್ಲದ ಮನಸಿನಿಂದ ಸಂಚಾರ ಮಾಡಬೇಕಾದ ಸ್ಥಿತಿ ಇದೆ. ಈ ರಸ್ತೆಗೆ ಇಳಿದಿದ್ದ ಮೂರು ಎಲೆಕ್ಟ್ರಿಕ್ ಬಸ್‌ಗಳು ಹಾಳಾಗಿವೆ. ಬಸ್‌ಗಳನ್ನು ಈ ರಸ್ತೆಯಲ್ಲಿ ಓಡಿಸುವಾಗ ಕಣ್ಣೀರು ಬರುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಭೂವ್ಯಾಜ್ಯ ಇದ್ದರೆ ಸರಿಪಡಿಸಲು ಬಿಬಿಎಂಪಿ ಕೂಡಲೇ ಕ್ರಮ ಕೈಗೊಳ್ಳಬೇಕು. ವ್ಯಾಜ್ಯ ಏನೇ ಇರಲಿ ಸಾರ್ವಜನಿಕರಿಗೆ ಅದು ಬೇಕಿಲ್ಲ, ಬೇಕಿರುವುದು ರಸ್ತೆ ಅಷ್ಟೇ. ಅದನ್ನು ಕಲ್ಪಿಸಿಕೊಡುವ ಕೆಲಸವನ್ನು ಬಿಬಿಎಂಪಿ ಮಾಡಬೇಕು’ ಎಂಬುದು ವಾಹನ ಸವಾರರ ಆಗ್ರಹ.

ಹೆಗ್ಗನಹಳ್ಳಿ ಮುಖ್ಯ ರಸ್ತೆಯ ಸ್ಥಿತಿ ಬಗ್ಗೆ ಪ್ರಶ್ನಿಸಿದರೆ ಬಿಬಿಎಂಪಿ ಅಧಿಕಾರಿಗಳ ಬಳಿ ಉತ್ತರವೇ ಇಲ್ಲ. ‘ಸಮಸ್ಯೆ ಬಗ್ಗೆ ಅರಿವಿದೆ, ಸರಿಪಡಿಸಲು ದಾರಿಗಳು ಕಾಣಿಸುತ್ತಿಲ್ಲ’ ಎಂದು ಪಾಲಿಕೆ ಎಂಜಿನಿಯರ್‌ಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಸಂಚಾರ ಯೋಗ್ಯ ರಸ್ತೆಯಾಗಿಸಲು ಪ್ರಯತ್ನ’

ರಸ್ತೆಗೆ ಜಾಗವೇ ಇರಲಿಲ್ಲ. 15–20 ವರ್ಷಗಳಿಂದ ಇರುವ ಸಮಸ್ಯೆಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇನೆ. ಜಾಗದ ಮಾಲೀಕರ ಜತೆ ಮಾತನಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಸಿದ್ದೇನೆ. ಸೂಕ್ತ ಪರಿಹಾರ ಕೊಟ್ಟರೆ ಜಮೀನು ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಪರಿಹಾರ ಕೊಡಿಸಲು ಸಿದ್ಧತೆ ನಡೆಸಿದ್ದೆವು. ಸರ್ಕಾರ ಬದಲಾದ ಬಳಿಕ ಸಾಧ್ಯವಾಗಿಲ್ಲ. ಇರುವಷ್ಟೇ ರಸ್ತೆಯನ್ನು ವಾಹನ ಸಂಚಾರ ಯೋಗ್ಯ ಮಾಡುವ ಪ್ರಯತ್ನ ನಡೆಸಿದ್ದೇವೆ. ಸರ್ಕಾರದ ಹಣದಲ್ಲಿ ರಸ್ತೆ ಅಭಿವೃದ್ಧಿಯಾದರೆ ಪರಿಹಾರ ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ಮಾಲೀಕರು ಒಪ್ಪುತ್ತಿಲ್ಲ. ನನ್ನ ಸ್ವಂತ ಹಣದಲ್ಲಿ ವೆಟ್‌ಮಿಕ್ಸ್ ಹಾಕಿ ಸ್ವಲ್ಪ ದುರಸ್ತಿ ಪಡಿಸಲು ಅವಕಾಶ ಕೊಡಿ ಎಂದು ಜಮೀನಿನ ಮಾಲೀಕರನ್ನು ಒಪ್ಪಿಸಿದ್ದೇನೆ. ಶೀಘ್ರವೇ ವಾಹನ ಸಂಚಾರ ಯೋಗ್ಯ ರಸ್ತೆಯನ್ನಾಗಿ ಮಾಡಲಾಗುವುದು.

–ಆರ್.ಮಂಜುನಾಥ್, ದಾಸರಹಳ್ಳಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.