
ಬೀದಿ ನಾಯಿ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸಲು ಬೆಂಗಳೂರು ದಕ್ಷಿಣ, ಕೇಂದ್ರ, ಪೂರ್ವ ನಗರ ಪಾಲಿಕೆಗಳು ಸಿದ್ಧತೆ ಆರಂಭಿಸಿವೆ.
ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಕ್ರೀಡಾ ಸಂಕೀರ್ಣಗಳು/ ಮೈದಾನಗಳ ಮಾಹಿತಿಯನ್ನು ಸಂಗ್ರಹಿಸಿ, ಅವುಗಳ ಆವರಣಗಳಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಲ್ಲಿ ಇರಿಸಬೇಕು ಎಂದು ಆಯುಕ್ತ ಕೆ.ಎನ್. ರಮೇಶ್ ಅವರು ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.
ಸ್ಥಳಾಂತರಿಸಬೇಕಾದ ನಾಯಿಗಳ ಅಂದಾಜು, ಆಶ್ರಯ ತಾಣ ನಿರ್ಮಿಸಲು ಸ್ಥಳ ಗುರುತಿಸುವುದು, ನಾಯಿಗಳನ್ನು ಹಿಡಿಯಲು ಮತ್ತು ನಿರ್ವಹಿಸಲು ಎನ್‌ಜಿಒಗಳನ್ನು ಗುರುತಿಸುವುದು, ನಾಯಿಗಳನ್ನು ಹಿಡಿದು ಅವುಗಳಿಗೆ ಲಸಿಕೆ ಹಾಕುವುದು ಮತ್ತು ಅವುಗಳನ್ನು ಪೋಷಿಸುವುದು, ಆಹಾರ ಮತ್ತು ಪಶುವೈದ್ಯಕೀಯ ಆರೈಕೆಗೆ ಕ್ರಮ, ಕೆನ್ನೆಲ್ ಮೂಲಸೌಕರ್ಯ ಅಭಿವೃದ್ಧಿಗಾಗಿ ಅನುದಾನ ನಿಗದಿಪಡಿಸಲು ಪ್ರಸ್ತಾವ ಸಲ್ಲಿಸಲು ತಿಳಿಸಿದರು.
ಅಧಿಕಾರಿಗಳು ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿ, ಪ್ರತಿಯೊಂದು ಕಾರ್ಯವನ್ನೂ ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕ್ರಮಗಳ ಬಗ್ಗೆ ಸೂಚನೆ: ಬೀದಿ ನಾಯಿಗಳ ನಿಯಂತ್ರಣ, ಪ್ರಾಣಿಗಳ ಕಲ್ಯಾಣ ಹಾಗೂ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ನಾಯಿಗಳ ನಿಖರ ಸಂಖ್ಯೆ, ಸ್ಥಳ ಹಾಗೂ ಅವುಗಳ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸಬೇಕು. ಆರೋಗ್ಯ, ಶಿಕ್ಷಣ, ಸಾರಿಗೆ, ಯೋಜನೆ ಹಾಗೂ ರೈಲ್ವೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಬೇಕು.
ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ಆರೈಕೆಗೆ ಸೂಕ್ತವಾದ ಸ್ಥಳವನ್ನು ನಗರ ಜಿಲ್ಲಾಡಳಿತದ ಸಹಕಾರದೊಂದಿಗೆ ಗುರುತಿಸಬೇಕು. ಪ್ರಾಣಿ ಕಲ್ಯಾಣ ಸಂಸ್ಥೆಗಳು ಹಾಗೂ ಪಶುಸಂಗೋಪನೆ ಇಲಾಖೆಯ ಸಹಯೋಗದೊಂದಿಗೆ ಉದ್ದೇಶಿತ ಸ್ಥಳಾಂತರ ಮಾಡಲಾಗುವ ಬೀದಿ ನಾಯಿಗಳ ಆಶ್ರಯ ತಾಣಗಳು/ಕೇಂದ್ರ ನಿರ್ವಹಣೆಗಾಗಿ ಆಸಕ್ತರನ್ನು ಆಹ್ವಾನಿಸಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.