ADVERTISEMENT

ಸಹಭಾಗಿತ್ವದಿಂದ ಪ್ರಜಾಪ್ರಭುತ್ವದ ಉಳಿವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 20:45 IST
Last Updated 14 ಆಗಸ್ಟ್ 2023, 20:45 IST
ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕ ಪ್ರಿಯಕೃಷ್ಣ, ಶಿವಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಸಿದ್ಧರಾಮಾನಂದಪುರಿ ಸ್ವಾಮೀಜಿ ಇದ್ದರು –ಪ್ರಜಾವಾಣಿ ಚಿತ್ರ
ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕ ಪ್ರಿಯಕೃಷ್ಣ, ಶಿವಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಸಿದ್ಧರಾಮಾನಂದಪುರಿ ಸ್ವಾಮೀಜಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಿರ್ಣಯ ಕೈಗೊಳ್ಳುವ ಸ್ಥಾನಗಳಲ್ಲಿ ಕೆಲವೇ ಸಮುದಾಯಗಳು ಇರುವ ಬದಲು ಎಲ್ಲ ಸಮುದಾಯಗಳೂ ಇರಬೇಕು. ಎಲ್ಲರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಂದ್ರ ಲೇಔಟ್‌ನಲ್ಲಿರುವ ಕನಕ ಗುರುಪೀಠದ ಶಾಖಾ ಮಠದಲ್ಲಿ ಸೋಮವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ಸಮಾಜಗಳಲ್ಲಿ ಪ್ರತಿಭಾವಂತರು ಇರುತ್ತಾರೆ. ಆದರೆ, ಎಲ್ಲ ಕಡೆಗಳಲ್ಲಿ ಒಂದೇ ರೀತಿಯ ಪ್ರೋತ್ಸಾಹ ಇರುವುದಿಲ್ಲ. ಪ್ರತಿಭೆಗಳಿದ್ದರೆ ಸಾಲದು. ಪ್ರತಿಭೆ
ಗಳನ್ನು ಬೆಳೆಸಲು ಪೂರಕವಾದ ವಾತಾವರಣ ನಿರ್ಮಾಣಗೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಲಿಕೆಯ ಕ್ಷೇತ್ರ ಯಾವುದೇ ಇರಲಿ, ಎಲ್ಲರಲ್ಲಿಯೂ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಇರಬೇಕು. ಆಗ ಮಾನವೀಯ ವ್ಯಕ್ತಿಯಾಗಲು ಸಾಧ್ಯ. ಸಮಾಜಮುಖಿಯಾಗಲು ಸಾಧ್ಯ ಎಂದರು.

ಪ್ರತಿಭಾ ಪುರಸ್ಕಾರ ಪಡೆದವರು ಮುಂದೆ ಬೇರೆಬೇರೆ ಕ್ಷೇತ್ರಕ್ಕೆ ಹೋಗುತ್ತಾರೆ. ಕೆಲವರು ರಾಜಕೀಯ ಕ್ಷೇತ್ರಕ್ಕೂ ಬರಬಹುದು. ರಾಜಕೀಯಕ್ಕೆ ಬರುವವರು ಅಧಿಕಾರ ಪಡೆಯುವುದನ್ನು ಧ್ಯೇಯವನ್ನಾಗಿಸದೇ ಸೇವೆ ಮಾಡುವುದನ್ನು ಗುರಿಯಾಗಿಸಿಕೊಳ್ಳಬೇಕು ಎಂದರು.

ಇಲ್ಲಿನ ಕನಕ ಗುರುಪೀಠದ ಸ್ಥಳ 30 ವರ್ಷಗಳ ಗುತ್ತಿಗೆಯಲ್ಲಿದೆ. ಅದನ್ನು ಮಠಕ್ಕೇ ನೀಡಲು ಪ್ರಯತ್ನಿಸಲಾಗುವುದು. ವಿದ್ಯಾರ್ಥಿನಿಲಯ ನಿರ್ಮಿಸಬೇಕೆಂಬ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿವಿಧ ಜಿಲ್ಲೆಗಳ 600ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಚಂದ್ರಾಲೇಔಟ್‌ನ ಮಠದ ಜಮೀನು ಉಳಿಯಲು ಕಾರಣರಾದ ಉಮೇಶ ಸ್ವಾಮೀಜಿ, ಸಾಧಕರಾದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ, ಇನ್‌ಸೈಟ್ಸ್‌ ಐಎಎಸ್‌ ಸಂಸ್ಥಾಪಕ ಜಿ.ಬಿ. ವಿನಯ್‌ ಕುಮಾರ್‌ ಅವರನ್ನು
ಗೌರವಿಸಲಾಯಿತು. 

ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ತಿಂಥಿಣಿ ಬ್ರಿಜ್‌ ಶಾಖಾ ಮಠದ ಸಿದ್ದರಾಮನಂದಪುರಿ ಸ್ವಾಮಿಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಪ್ರಿಯಕೃಷ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.