ADVERTISEMENT

ಪಾಕ್‌ ವ್ಯಕ್ತಿಗಳಿದ್ದ ವಾಟ್ಸ್‌ಆ್ಯಪ್‌ ಗ್ರೂಪಲ್ಲಿ ಸಕ್ರಿಯನಾಗಿದ್ದ ಶಂಕಿತ ಉಗ್ರ

ಮೊಬೈಲ್‌ನಲ್ಲಿ ದಾಖಲೆ ಅಳಿಸಿ ಹಾಕಿರುವ ಶಂಕಿತ ಉಗ್ರರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 2:51 IST
Last Updated 28 ಜುಲೈ 2022, 2:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಅಲ್‌ಕೈದಾ’ ಉಗ್ರ ಸಂಘಟನೆ ಸೇರಲು ಹೊರಟಿದ್ದ ಶಂಕಿತ ಉಗ್ರರಾದ ಅಖ್ತರ್‌ ಹುಸೇನ್‌ ಲಷ್ಕರ್‌ ಹಾಗೂ ಅಬ್ದುಲ್ ಅಲೀಂ ಮಂಡಲ್‌ನ ವಿಚಾರಣೆ ನಡೆಯುತ್ತಿದ್ದು, ಉಗ್ರ ಚಟುವಟಿಕೆಗೆ ಸಂಚು ರೂಪಿಸುತ್ತಿದ್ದರು ಎಂಬುದಕ್ಕೆ ಕೆಲವು ಪುರಾವೆಗಳು ಸಿಸಿಬಿ ಪೊಲೀಸರಿಗೆ ಲಭಿಸಿವೆ.

ಇಬ್ಬರೂ ಶಂಕಿತರ ಮೊಬೈಲ್‌ನಲ್ಲಿ ರಹಸ್ಯ ಮಾಹಿತಿಗಳು ತನಿಖಾಧಿಕಾರಿ ಗಳಿಗೆ ಸಿಕ್ಕಿದ್ದು, ಇನ್ನೂ ಕೆಲವು ದಾಖಲೆ ಗಳನ್ನು ಕೆಲ ದಿನಗಳ ಹಿಂದಷ್ಟೇ ಅಳಿಸಿ ಹಾಕಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ‘ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಗಾ ನಿಸ್ತಾನ ಹಾಗೂ ಜಮ್ಮು– ಕಾಶ್ಮೀರದ ವ್ಯಕ್ತಿಗಳಿದ್ದ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅಖ್ತರ್‌ ಹುಸೇನ್‌ ಸಕ್ರಿಯನಾಗಿದ್ದ. ಪ್ರತಿ ಗ್ರೂಪ್‌ನಲ್ಲೂ 25ರಿಂದ 30 ಮಂದಿ ಇದ್ದರು. ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ವಿನಿಯಮ ಆಗುತ್ತಿತ್ತು. ಉಗ್ರ ಸಂಘಟನೆ ಸೇರುವ ಬಗೆ ಹಾಗೂ ಅಫ್ಗಾನಿಸ್ತಾನಕ್ಕೆ ತೆರಳುವ ಮಾರ್ಗದ ಕುರಿತು ಚರ್ಚೆ ನಡೆಯುತ್ತಿತ್ತು. ಚರ್ಚೆಯಾದ ವಿಷಯವನ್ನು ಆಗಿಂದಾ ಗಲೇ ಅಳಿಸಿ ಹಾಕುತ್ತಿದ್ದರು. ತಾಂತ್ರಿಕ ತಜ್ಞರ ಮೂಲಕ ದಾಖಲೆ ಮರಳಿ ಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಇಬ್ಬರು ಶಂಕಿತರ ಬಳಿಯೂ ತಪ್ಪಾಗಿ ಮುದ್ರಿಸಿರುವ ಕುರಾನ್‌ ಪ್ರತಿಗಳು ಪತ್ತೆಯಾಗಿವೆ. ಯುವಕರನ್ನು ಪ್ರಚೋದಿಸಲು ಅಲ್‌ಕೈದಾ ಸಂಘ ಟನೆಯ ವ್ಯಕ್ತಿಯೊಬ್ಬ ಇಬ್ಬರಿಗೂ ಅವನ್ನು ಕಳುಹಿಸಿದ್ದ. ಅದರಲ್ಲಿ ಷರಿಯತ್‌ ಕಾನೂನು, ರಕ್ತಪಾತ, ತಮ್ಮದೇ ಕಾನೂನಿಗೆ ಅನುಗುಣವಾಗಿಯೇ ಬದುಕಬೇಕೆಂಬ ಮಾಹಿತಿಗಳಿವೆ. ಅಸ್ಸಾಂನ ಅಖ್ತರ್ ಹುಸೇನ್ ಹಾಗೂ ಪಶ್ಚಿಮ ಬಂಗಾಳದ ಅಬ್ದುಲ್ ಅಲೀಂ ಹಲವು ತಿಂಗಳಿನಿಂದ ಅಲ್‌ಕೈದಾ ಉಗ್ರರ ಸಂಪರ್ಕದಲ್ಲಿರುವುದು ವಿಚಾರಣೆಯಿಂದ ಗೊತ್ತಾಗಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.