ADVERTISEMENT

ಸುಸ್ಥಿರ ಅಭಿವೃದ್ಧಿಯ ಗುರಿ: ನೀತಿ ಆಯೋಗದ ತಂಡ ರಾಜ್ಯಕ್ಕೆ ಇಂದು

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 20:53 IST
Last Updated 27 ಜೂನ್ 2021, 20:53 IST

ಬೆಂಗಳೂರು: ಸುಸ್ಥಿರ ಅಭಿವೃದ್ಧಿಯ ಗುರಿಗಳು (ಎಸ್‌ಡಿಜಿ) ಸೂಚ್ಯಂಕದ ಬಗ್ಗೆ ಚರ್ಚಿಸಲು ನೀತಿ ಆಯೋಗದ ಸಲಹೆಗಾರರಾದ ಸಂಯುಕ್ತ ಸಮದ್ದಾರ್ ನೇತೃತ್ವದ ತಂಡ ಸೋಮವಾರ (ಜೂನ್‌ 28) ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಯ ಕಾರ್ಯದರ್ಶಿಗಳ ಸಭೆ ಆಯೋಜಿಸಲಾಗಿದೆ.

ಕರ್ನಾಟಕ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ, ಗುರಿ ತಲುಪಲು ತೆಗೆದುಕೊಂಡ ಕ್ರಮಗಳು ಮತ್ತು ಇತರ ರಾಜ್ಯಗಳು ಈ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಡತನ ನಿರ್ಮೂಲನವೂ ಸೇರಿದಂತೆ ಕೇಂದ್ರ ಸರ್ಕಾರ ರೂಪಿಸಿದ ಕೆಲವು ಕಾರ್ಯತಂತ್ರಗಳನ್ನು ನೀತಿ ಆಯೋಗದ ತಂಡ ಸಭೆಯಲ್ಲಿ ಹಂಚಿಕೊಳ್ಳಲಿದೆ.

ನೀತಿ ಆಯೋಗ ಅಭಿವೃದ್ಧಿಪಡಿಸಿದ 2020-21ನೇ ಸಾಲಿನ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ 72 ಅಂಕ ಗಳಿಸಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 6 ಅಂಕ ಹೆಚ್ಚು ಗಳಿಸಿದೆ. 75 ಅಂಕ ಗಳಿಸಿ ಕೇರಳ ಮೊದಲ ಸ್ಥಾನದಲ್ಲಿದೆ. ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ತಲಾ 74 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಉತ್ತರಾಖಂಡ್‌ (ತಲಾ 72) ಮೂರನೇ ಸ್ಥಾನದಲ್ಲಿದೆ.

ADVERTISEMENT

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಗುರಿ ತಲುಪಲು ರಾಜ್ಯ ಸರ್ಕಾರ ಪ್ರಯತ್ನ ಮುಂದುವರಿಸಿದೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020–21ರಲ್ಲಿ ರಾಜ್ಯ 9 ಗುರಿಗಳಲ್ಲಿ ಸುಧಾರಣೆ ಕಂಡಿದೆ. ಇದೇ 29 ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಸಭೆ ನಡೆಯಲಿದ್ದು, ಸಭೆಯಲ್ಲಿ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಯೋಜನೆ, ಸಾಂಖ್ಯಿಕ ಮತ್ತು ಕಾರ್ಯಕ್ರಮಗಳ ಸಚಿವ ಕೆ.ಸಿ.ನಾರಾಯಣ ಗೌಡ ಭಾಗವಹಿಸಲಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ಸಾಧನೆ ಕುರಿತು ಮುಖ್ಯಮಂತ್ರಿ ಕಿರುಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.