ADVERTISEMENT

ಸ್ವದೇಶಿ ಎಂಬುದು ದೂರದರ್ಶಿತ್ವ, ಸಂಕಲ್ಪಶಕ್ತಿಯ ಸಂಕೇತ: ವಿಶ್ವಸಂತೋಷ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 20:12 IST
Last Updated 7 ಜನವರಿ 2026, 20:12 IST
ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದ್ದ ಸ್ವದೇಶಿ ಮೇಳದ ಉದ್ಘಾಟನೆ ಸಮಾರಂಭದಲ್ಲಿ ವಿಶ್ವಸಂತೋಷ ಭಾರತಿ ಸ್ವಾಮೀಜಿ, ಎಸ್. ಮುನಿರಾಜು, ಡಿ.ವಿ. ಸದಾನಂದ ಗೌಡ, ರವೀಂದ್ರ ಪೈ ಭಾಗವಹಿಸಿದ್ದರು
ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದ್ದ ಸ್ವದೇಶಿ ಮೇಳದ ಉದ್ಘಾಟನೆ ಸಮಾರಂಭದಲ್ಲಿ ವಿಶ್ವಸಂತೋಷ ಭಾರತಿ ಸ್ವಾಮೀಜಿ, ಎಸ್. ಮುನಿರಾಜು, ಡಿ.ವಿ. ಸದಾನಂದ ಗೌಡ, ರವೀಂದ್ರ ಪೈ ಭಾಗವಹಿಸಿದ್ದರು   

ಪೀಣ್ಯ ದಾಸರಹಳ್ಳಿ: ಸ್ವದೇಶಿ, ಭಾರತದ ದೂರದರ್ಶಿತ್ವದ ಮತ್ತು ಸಂಕಲ್ಪಶಕ್ತಿಯ ಸಂಕೇತ. ಸ್ವದೇಶಿ ಮೇಳ ಸ್ವಾಭಿಮಾನದ ಶಕ್ತಿಯ ಪ್ರತೀಕ. ಇಂತಹ ಮೇಳಗಳನ್ನು ಆಯೋಜಿಸುವ ಮೂಲಕ ಭಾರತದ ಅಂತಃಸತ್ವವನ್ನು ಜಾಗೃತಗೊಳಿಸುವ ಕೆಲಸ ಸ್ವದೇಶಿ ಜಾಗರಣ ಮಂಚ್ ಮಾಡುತ್ತಿದೆ ಎಂದು ಬಾರ್ಕೂರು ಮಹಾಸಂಸ್ಥಾನದ ವಿಶ್ವಸಂತೋಷ ಭಾರತಿ ಸ್ವಾಮೀಜಿ  ಹೇಳಿದರು.

ಬಾಗಲಗುಂಟೆಯ ಎಂಇಐ ಮ್ಯೆದಾನದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಲಾದ ಸ್ವದೇಶಿ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

'ಭಾರತ ಸಂಸ್ಕಾರವನ್ನು, ಯೋಜನೆ, ಯೋಚನೆಯನ್ನು ಜಗತ್ತಿಗೆ ಕಲಿಸಿಕೊಟ್ಟಂತಹ ರಾಷ್ಟ್ರ. ಆದರೆ ವ್ಯಾಪಾರದ ಹೆಸರಲ್ಲಿ ಈ ನಾಡಿಗೆ ಬಂದ ಪಾಶ್ಚಾತ್ಯರು ಇಲ್ಲಿನ ಸಂಸ್ಕೃತಿಗೆ ಧಕ್ಕೆ ತಂದರು. ಸ್ವಾಭಿಮಾನದ ಆಧಾರವಾಗಿದ್ದ ಕರಕುಶಲ ವ್ಯಾಪಾರವನ್ನು ಧ್ವಂಸಗೊಳಿಸಿದರು. ಮುಖ್ಯವಾಗಿ ನಮ್ಮ ಯೋಚನೆಯೇ ತಪ್ಪೆಂದರು. ಅದನ್ನೇ ನಂಬಿಕೊಂಡು ಆದಂತಹ ಅವಾಂತರಗಳಿಂದ ಹೊರಗೆ ಬರಬೇಕು. ರಾಷ್ಟ್ರ ಮುಖ್ಯ ಎನ್ನುವ ಭಾವ ನಮ್ಮಲ್ಲಿ ಜಾಗೃತವಾಗಬೇಕು’ ಎಂದು ಹೇಳಿದರು.

ADVERTISEMENT

ಶಾಸಕ ಎಸ್. ಮುನಿರಾಜು, ‘ದೊಡ್ಡ ದೊಡ್ಡ ಕಂಪೆನಿಗಳ ಜೊತೆಗೆ ಸ್ವದೇಶಿ ವಸ್ತುಗಳು ಸ್ಪರ್ಧಿಸಬೇಕಾದರೆ ರಾಷ್ಟ್ರದ ವ್ಯಾಪಾರ ಕ್ಷೇತ್ರದಲ್ಲಿ ಇರಬೇಕಾದ ವಾತಾವರಣವನ್ನು ನಿರ್ಮಿಸುವಲ್ಲಿ ಸ್ವದೇಶಿ ಜಾಗರಣ ಮಂಚ್‌ನ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಸರ್ಕಾರದ್ದೂ ಇದೆ. ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಆತ್ಮನಿರ್ಭರದ ಕರೆ ಸ್ವದೇಶಿತನಕ್ಕೆ ಹೊಸ ಹುರುಪನ್ನು ನೀಡಿದೆ’ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಚಿಂತಕ ಚಕ್ರವರ್ತಿ ಸೂಲಿಬೆಲೆ, ಸ್ವದೇಶಿ ಜಾಗರಣ ಮಂಚ್ ಸಂಯೋಜಕ ರವೀಂದ್ರ ಪೈ, ಸಹ ಸಂಯೋಜಕ ಅಶ್ವಿನ್ ಮಹಾಜನ್, ಜಾರ್ಖಂಡ್ ಮುಖ್ಯಸ್ಥ ಸಚೀಂದ್ರ ಬಿರಿಯಾರ್, ಸ್ವದೇಶಿ ಮೇಳದ ಸಂಯೋಜಕ ರವೀಂದ್ರ ಪ್ಯೆ, ಸಹ ಸಂಯೋಜಕ ದಾನಪ್ಪ, ಸಂಘಟಕ ಭರತ್ ಸೌಂದರ್ಯ, ಸಹ ಸಂಘಟಕ ಲಕ್ಷ್ಮಿ ವೆಂಕಟೇಶ್, ಸಂಚಾಲಕ ವಸಂತಮೂರ್ತಿ ಉಪಸ್ಥಿತರಿದ್ದರು.