ADVERTISEMENT

ಬೆವರಿನ ಹನಿ ಬಿದ್ದ ಪ್ರಕರಣ | ಹೋಟೆಲ್‌ನಲ್ಲಿ ಗಲಾಟೆ: ದೂರು– ಪ್ರತಿದೂರು

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:05 IST
Last Updated 27 ಮೇ 2025, 16:05 IST
   

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ಟ್ರಸ್ಟ್‌ ಬೋರ್ಡ್‌ನ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಆದಿಕೇಶವುಲು ಅವರ ಮೊಮ್ಮಗ ಗೀತವಿಷ್ಣು ಹಾಗೂ ಕಾಂಗ್ರೆಸ್‌ ಮುಖಂಡ ಸೈಯದ್ ಸಾದಿಕ್‌ ಅವರು ಶಾಂಗ್ರಿಲಾ ಹೋಟೆಲ್‌ನಲ್ಲಿ ಜಿಮ್‌ ಮಾಡುತ್ತಿದ್ದ ವೇಳೆ ಗಲಾಟೆ ಮಾಡಿಕೊಂಡಿದ್ದು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು– ಪ್ರತಿದೂರು ನೀಡಿದ್ದಾರೆ.  

ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಗೀತವಿಷ್ಣು ಅವರು ಜಯನಗರದಲ್ಲಿ ನೆಲಸಿದ್ದಾರೆ. ಗಲಾಟೆಗೆ ಸಂಬಂಧಿಸಿದಂತೆ ಸೈಯದ್‌ ಸಾದಿಕ್‌ ಅವರು ಮೇ 19ರಂದು ರಾತ್ರಿ 10.45ಕ್ಕೆ ದೂರು ನೀಡಿದ್ದರು. ಅಂದೇ ರಾತ್ರಿ 11.30ಕ್ಕೆ ಗೀತವಿಷ್ಣು ಅವರು ಪ್ರತಿ ದೂರು ನೀಡಿದ್ದರು.

ADVERTISEMENT

‘ಶಾಂಗ್ರಿಲಾ ಹೋಟೆಲ್‌ನ ಕ್ಲಬ್‌ ಸದಸ್ಯನಾಗಿದ್ದು, ಹೋಟೆಲ್‌ನಲ್ಲಿದ್ದ ವ್ಯಕ್ತಿಯೊಬ್ಬ ತಡೆದು ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಬೆನ್ನಿಗೆ ಪೆಟ್ಟಾಗಿದೆ’ ಎಂದು ಸೈಯದ್ ಸಾದಿಕ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಜಿಮ್‌ನಲ್ಲಿ ವರ್ಕ್‌ಔಟ್ ಮುಗಿಸಿ ಬಟ್ಟೆ ಬದಲಿಸುವಾಗ ಸ್ಥಳದಲ್ಲಿದ್ದ ಸೈಯ್ಯದ್ ಸಾದಿಕ್ ಮೇಲೆ ಬೆವರಿನ ಹನಿ ಬಿದ್ದಿದೆ. ಅದರಿಂದ ಸಿಟ್ಟಿಗೆದ್ದ ಸಾದಿಕ್ ಅವರು ನನ್ನ ಜೊತೆ ಗಲಾಟೆ ಮಾಡಿದರು. ಹಲ್ಲೆ ನಡೆಸಿದ್ದರಿಂದ ಬಲಭಾಗ ಕಣ್ಣಿಗೆ ಗಾಯವಾಗಿದೆ’ ಎಂದು ಗೀತವಿಷ್ಣು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮತ್ತೊಮ್ಮೆ ಜಿಮ್‌ನಲ್ಲಿ ಕಾಣಿಸಿಕೊಂಡರೆ ಕೊಲೆ ಮಾಡುವುದಾಗಿಯೂ ಸೈಯದ್ ಸಾದಿಕ್‌ ಅವರು ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಎರಡು ವಾರಗಳ ಹಿಂದೆ ಅದೇ ಹೋಟೆಲ್‌ನಲ್ಲಿ ಕಾಂಗ್ರೆಸ್ ಯುವ ಘಟಕದ ಮುಖಂಡರೊಬ್ಬರ ಜತೆಗೆ ಮಾತಿನ ಚಕಮಕಿ ನಡೆದಿತ್ತು. ಆ ಸಂದರ್ಭದಲ್ಲಿ ಈ ಸೈಯ್ಯದ್ ಸಾದಿಕ್ ಸೇರಿದಂತೆ ನಾಲ್ವರು ಅವರ ಜೊತೆಗಿದ್ದರು. ಬಳಿಕ ಹೋಟೆಲ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಮತ್ತೊಮ್ಮೆ ಅದೇ ರೀತಿ ಗಲಾಟೆ ನಡೆಸಿ ಹಲ್ಲೆ ನಡೆಸಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯ’ ಎಂದು ಗೀತವಿಷ್ಣು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.