ಬೆಂಗಳೂರು: ಸರ್ಜಾಪುರ ರಸ್ತೆಯ ಸೆರಿನಿಟಿ ಬಡಾವಣೆಯಲ್ಲಿ ಟ್ಯಾಂಕರ್ ಮೈ ಮೇಲೆ ಹರಿದು ಮೂರು ವರ್ಷದ ಬಾಲಕ ಪ್ರತಿಷ್ಠ್ ಮೃತಪಟ್ಟಿದ್ದಾನೆ.
‘ಮೃತ ಪ್ರತಿಷ್ಠ್, ನೇಪಾಳದ ಕೀಮ್ ರಾಜ್ ಹಾಗೂ ಜಯಂತಿ ದಂಪತಿಯ ಮಗ. ಕೆಲ ವರ್ಷಗಳ ಹಿಂದೆಯಷ್ಟೇ ಬಾಲಕನ ಪೋಷಕರು ನಗರಕ್ಕೆ ಬಂದಿದ್ದರು. ತಂದೆ ಕೀಮ್ ರಾಜ್, ಸೆರಿನಿಟಿ ಬಡಾವಣೆಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು’ ಎಂದು ಎಚ್‌ಎಸ್‌ಆರ್ ಬಡಾವಣೆಯ ಸಂಚಾರ ಪೊಲೀಸರು ಹೇಳಿದರು.
‘ಅಪಾರ್ಟ್‌ಮೆಂಟ್ ಸಮುಚ್ಚಯದವರು ಟ್ಯಾಂಕರ್ ವಾಹನದಲ್ಲಿ ನೀರು ತರಿಸಿದ್ದರು. ನಿಗದಿತ ಟ್ಯಾಂಕ್‌ನಲ್ಲಿ ನೀರು ತುಂಬಿಸಿದ್ದ ಚಾಲಕ, ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದರು. ಅದೇ ಸ್ಥಳದಲ್ಲಿ ಬಾಲಕ ಆಟವಾಡುತ್ತಿದ್ದ. ಅದನ್ನು ಚಾಲಕ ನೋಡಿರಲಿಲ್ಲ. ಬಾಲಕನ ಮೇಲೆಯೇ ಟ್ಯಾಂಕರ್ ಚಕ್ರ ಹರಿದಿತ್ತು’ ಎಂದೂ ತಿಳಿಸಿದರು.
‘ಅಜಾಗರೂಕತೆಯ ಚಾಲನೆ ಮಾಡಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.