ADVERTISEMENT

ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸಿಎಸ್‌ಇ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:56 IST
Last Updated 16 ಜನವರಿ 2026, 16:56 IST
ಟಿಎಪಿಎಂಐ ನಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಲೋಟಸ್ ಪೆಟಲ್ ಫೌಂಡೇಶನ್‌ನ ಸ್ಥಾಪಕ ಕುಶಾಲ್ ರಾಜ್ ಚಕ್ರವರ್ತಿ ಅವರನ್ನು ಮಾಹೆ ಬೆಂಗಳೂರಿನ ಹೆಚ್ಚುವರಿ ಕುಲಸಚಿವರಾದ ಡಾ.ರಾಘವೇಂದ್ರ ಪ್ರಭು.ಪಿ ಹಾಗೂ ಡೀನ್ ಪ್ರೊ.ನವನೀತ ಕೃಷ್ಣನ್ ಸನ್ಮಾನಿಸಿದರು.
ಟಿಎಪಿಎಂಐ ನಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಲೋಟಸ್ ಪೆಟಲ್ ಫೌಂಡೇಶನ್‌ನ ಸ್ಥಾಪಕ ಕುಶಾಲ್ ರಾಜ್ ಚಕ್ರವರ್ತಿ ಅವರನ್ನು ಮಾಹೆ ಬೆಂಗಳೂರಿನ ಹೆಚ್ಚುವರಿ ಕುಲಸಚಿವರಾದ ಡಾ.ರಾಘವೇಂದ್ರ ಪ್ರಭು.ಪಿ ಹಾಗೂ ಡೀನ್ ಪ್ರೊ.ನವನೀತ ಕೃಷ್ಣನ್ ಸನ್ಮಾನಿಸಿದರು.   

ಯಲಹಂಕ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಕ್ಯಾಂಪಸ್‌ನಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ಪದ್ಮಭೂಷಣ ತೋನ್ಸೆ ಅನಂತ ಪೈ ಅವರ 104ನೇ ಜನ್ಮದಿನ ಆಚರಿಸಲಾಯಿತು.

ಇದೇ ವೇಳೆ ಸಿಎಸ್‌ಇ ಕೇಂದ್ರ ಉದ್ಘಾಟಿಸಿ ಮಾತನಾಡಿದ ಮಾಹೆ ಬೆಂಗಳೂರು ಕ್ಯಾಂಪಸ್‌ನ ಹೆಚ್ಚುವರಿ ಕುಲಸಚಿವ ರಾಘವೇಂದ್ರ ಪ್ರಭು, ‘ಸಂಸ್ಥಾಪಕರಾದ ಟಿ.ಎ. ಪೈ ಅವರ 104ನೇ ಜನ್ಮದಿನದ ಮುನ್ನಾದಿನ 'ಸಾಮಾಜಿಕ ಸಬಲೀಕರಣ ಕೇಂದ್ರʼದ(ಸಿಎಸ್‌ಇ) ಉದ್ಘಾಟನೆ ಆಗಿರುವುದು, ನಿರ್ವಹಣೆ ಶಿಕ್ಷಣವು ಸಾಮಾಜಿಕ ಸಬಲೀಕರಣದತ್ತ ಗಮನ ಹರಿಸಬೇಕು ಎಂಬ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತಿದೆ. ಈ ಕೇಂದ್ರವು ಜ್ಞಾನ ಮತ್ತು ಕ್ರಿಯೆಯ ನಡುವೆ ಸೇತುವೆಯಾಗಲಿದ್ದು, ವ್ಯವಹಾರದ ಶ್ರೇಷ್ಠತೆಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಮೈಗೂಡಿಸಿಕೊಂಡಿರುವ ನಾಯಕರನ್ನು ರೂಪಿಸಲಿದೆ’ ಎಂದರು.

ಲೋಟಸ್ ಪೆಟಲ್ ಫೌಂಡೇಶನ್‌ನ ಸಂಸ್ಥಾಪಕ ಕುಶಾಲ್ ರಾಜ್ ಚಕ್ರವರ್ತಿ ಮಾತನಾಡಿ, ‘ದೇಶವು ಮೂರು ವಿಭಾಗಗಳಾಗಿ ವಿಂಗಡಣೆಯಾಗಿದ್ದು, ವಾರ್ಷಿಕ ₹80 ಸಾವಿರಕ್ಕಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿರುವ ಸುಮಾರು 30 ಕೋಟಿ ಜನರನ್ನು ಹೊಂದಿರುವ ‘ಇಂಡಿಯಾ-3’ ನಮ್ಮ ದೇಶದ ಭವಿಷ್ಯವಾಗಿದೆ. ಶಿಕ್ಷಣದ ಮೂಲಕ ಈ ಅಂತರವನ್ನು ನಿವಾರಿಸಬಹುದು’ ಎಂದು ಸಲಹೆ ನೀಡಿದರು.

ADVERTISEMENT

ಟಿಎಪಿಎಂಐ ಬೆಂಗಳೂರು ಡೀನ್ ಪ್ರೊ.ನವನೀತ ಕೃಷ್ಣನ್ ಮಾತನಾಡಿ, ‘ಸಾಮಾಜಿಕ ಸಬಲೀಕರಣ ಕೇಂದ್ರವು ಒಂದು ಬಹುಶಿಸ್ತೀಯ ವೇದಿಕೆಯಾಗಿದ್ದು, ನಿರುದ್ಯೋಗ, ಸಮುದಾಯಗಳ ಒಳಗೊಳ್ಳುವಿಕೆ, ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆ, ಉದ್ಯಮಶೀಲತೆ ಹಾಗೂ ಮೂಲಸೌಕರ್ಯ ಮತ್ತು ಆರೋಗ್ಯದಂತಹ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.

ಜಾಗತಿಕ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವಿ.ಪ್ರೇಮ್ ಕುಮಾರ್, ಎಚ್‌.ಆರ್ ಬಿಸಿನೆಸ್ ಪಾಲುದಾರ ಸಂಸ್ಥೆಯ ನಿರ್ದೇಶಕ ಸ್ವಾಮಿನಾಥನ್ ಚಂದ್ರಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.