ಬೆಂಗಳೂರು: ಪ್ರತಿಷ್ಠಿತ ‘ರಾಮನ್ ರೀಸರ್ಚ್ ಇನ್ಸ್‌ಟಿಟ್ಯೂಟ್‘ನ ನೂತನ ನಿರ್ದೇಶಕರಾಗಿ ಭೌತಶಾಸ್ತ್ರಜ್ಞ ಪ್ರೊ.ತರುಣ್ ಸೌರದೀಪ್ ಅಧಿಕಾರ ವಹಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಅವರು ಪುಣೆಯ ಐಸೆರ್ (ಐಐಎಸ್‌ಇಆರ್)ನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಇವರು ಪುಣೆಯ ’ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಮತ್ತು ಆಸ್ಟ್ರೋಫಿಸಿಕ್ಸ್‘(ಐಯುಸಿಎಎ) ಸಂಸ್ಥೆಯಲ್ಲಿ ಪಿಎಚ್‌ಡಿ ಮಾಡಿದ್ದರು. ವಿಶ್ವವಿಜ್ಞಾನ (ಕಾಸ್ಮಾಲಜಿ) ಮತ್ತು ಗುರುತ್ವಅಲೆ ಭೌತವಿಜ್ಞಾನ (ಗ್ರಾವಿಟೇಷನಲ್ ವೇವ್ ಫಿಸಿಕ್ಸ್)ನಲ್ಲಿ ಇವರ ಪರಿಣತಿ. ಆರಂಭದ ವರ್ಷದಲ್ಲಿ ಐಯುಸಿಎಎದಲ್ಲಿ ಎರಡು ದಶಕ ಕಾರ್ಯನಿರ್ವಹಿಸಿದ್ದರು. ಬಳಿಕ ಐಸೆರ್‌ಗೆ ನಿಯೋಜನೆ ಮೇಲೆ ಹೋದರು.
ಗುರುತ್ವ ಅಲೆ ವಿಷಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆಯಲ್ಲಿ ಇವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ವಿಶ್ವ ವಿದ್ಯುತ್ಕಾಂತಅಲೆಗಳ ಮತ್ತು ಗುರುತ್ವ ಅಲೆ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಅಂತರ ರಾಷ್ಟ್ರೀಯ ಸಂಶೋಧನೆಗಳಲ್ಲಿ ಭಾರತೀಯ ತಂಡದ ನೇತತ್ವವನ್ನು ತರುಣ್ ವಹಿಸಿದ್ದರು. 2011 ರಲ್ಲಿ ಲಿಗೊ ಇಂಡಿಯಾ ಮತ್ತು ಇಂಡಿಯಾ ಸೈಂಟಿಫಿಕ್ ಮ್ಯಾನೇಜ್‌ಮೆಂಟ್ ಬೋರ್ಡ್–ಲಿಗೊದ ಕಾರ್ಯದರ್ಶಿ ಸದಸ್ಯ ಮತ್ತು ವಕ್ತಾರರಾಗಿಯೂ (ವಿಜ್ಞಾನ) ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.