ADVERTISEMENT

ಲಾಕ್‌ಡೌನ್‌ ನಡುವೆಯೂ ಸಾವಿರ ಕೋಟಿ ತೆರಿಗೆ ಸಂಗ್ರಹ

ಬಿಬಿಎಂಪಿ ಆಸ್ತಿ ತೆರಿಗೆ: ರಿಯಾಯಿತಿ ಪಡೆಯಲು ನಾಲ್ಕೇ ದಿನ ಅವಕಾಶ

ಪ್ರವೀಣ ಕುಮಾರ್ ಪಿ.ವಿ.
Published 27 ಮೇ 2020, 19:22 IST
Last Updated 27 ಮೇ 2020, 19:22 IST
ಬೆಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು ಮಹಾನಗರ ಪಾಲಿಕೆ   

ಬೆಂಗಳೂರು: ಕೊರೊನಾ ನಿಯಂತ್ರಣ ಸಲುವಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ ನಡುವೆಯೂ ಬಿಬಿಎಂಪಿ 2020–21ನ ಆರ್ಥಿಕ ವರ್ಷದ ಮೊದಲ ಎರಡು ತಿಂಗಳುಗಳಲ್ಲಿ ₹ 1,028 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಇದರಿಂದ ಪ್ರಸಕ್ತ ಸಾಲಿನ ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿ ಶೇ 42ರಷ್ಟು ಗುರಿ ಸಾಧನೆ ಮಾಡಿದಂತಾಗಿದೆ.

ಮೇ 31ರ ಒಳಗೆ ತೆರಿಗೆ ಪಾವತಿಸುವವರಿಗೆ ಬಿಬಿಎಂಪಿ ಶೇ 5ರಷ್ಟು ರಿಯಾಯಿತಿ ಪ್ರಕಟಿಸಿದೆ. ಈ ರಿಯಾಯಿತಿ ಪಡೆಯಲು ನಾಲ್ಕು ದಿನಗಳ ಅವಕಾಶ ಮಾತ್ರ ಉಳಿದಿದೆ.

‘ಕಳೆದ ವರ್ಷ ಯಾವ ಬಿಕ್ಕಟ್ಟೂ ಇಲ್ಲದ ಸಂದರ್ಭದಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ₹1,530 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ, ಲಾಕ್‌ಡೌನ್‌ ನಡುವೆಯೂ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹವಾಗಿದೆ ಎಂದೇ ಹೇಳಬಹುದು’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಬಸವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶೇ 5ರಷ್ಟು ರಿಯಾಯಿತಿ ಪಡೆಯಲು ಮೇ 31ರವರೆಗೆ ಅವಕಾಶ ಇದೆ. ಈ ಅವಧಿಯಲ್ಲಿ ಮತ್ತೆ ₹ 100 ಕೋಟಿಯಿಂದ ₹ 150 ಕೋಟಿ ತೆರಿಗೆ ಸಂಗ್ರಹವಾಗಬಹುದು’ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಬಾಕಿ ತೆರಿಗೆ ವಸೂಲಿಯಲ್ಲಿ ಈ ಬಾರಿಯೂ ಪ್ರಗತಿ ಆಗಿಲ್ಲ. ಸೋಮವಾರದವರೆಗೆ 62,635 ಆಸ್ತಿಗಳ ಮಾಲೀಕರಿಂದ ಈ ಹಿಂದಿನ ವರ್ಷಗಳ ಬಾಕಿ ತೆರಿಗೆ ಒಟ್ಟು ₹ 50.10 ಕೋಟಿ ಮಾತ್ರ ವಸೂಲಿಯಾಗಿದೆ. ಪಾಲಿಕೆಯು ಬಾಕಿ ತೆರಿಗೆ ವಸೂಲಿ ಮಾಡಬೇಕಾದ ಮೊತ್ತ ₹2500.50 ಕೋಟಿಗಳಷ್ಟಿದೆ. ಆದರೆ, ಇದರಲ್ಲಿ ಒಂದು ಆಸ್ತಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚು ಅರ್ಜಿಗಳಿದ್ದಾಗ ಅವುಗಳನ್ನು ಒಂದುಗೂಡಿಸಬೇಕಾದ ಮತ್ತು ನಿಷ್ಕ್ರಿಯಗೊಳಿಸಿ ಮರುಹೊಂದಾಣಿಕೆ ಮೊತ್ತವೇ ₹ 978.01ಕೋಟಿ. ಈ ಮೊತ್ತವನ್ನು ಬೇಡಿಕೆ ಪಟ್ಟಿಯಿಂದ ಕೈಬಿಡಬೇಕಿದೆ.

‘ಹಿಂದಿನ ವರ್ಷಗಳಲ್ಲಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಈ ಎರಡು ತಿಂಗಳಲ್ಲಿ ನೋಟಿಸ್‌ ನೀಡಿ ವಸೂಲಿಗೆ ಕಟ್ಟುನಿಟ್ಟಾಗಿ ಕ್ರಮಕೈಗೊಂಡಿಲ್ಲ. ಜೂನ್‌ನಿಂದ ನೋಟಿಸ್‌ ಜಾರಿ ಮಾಡಿ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ವಿಶೇಷ ಆಯುಕ್ತರು ತಿಳಿಸಿದರು.

ರಾಜರಾಜೇಶ್ವರಿ ನಗರ ವಲಯದ ಕಂದಾಯ ಉಪ ಆಯುಕ್ತ ಶಿವೇಗೌಡ ಅವರು ಬಾಕಿ ತೆರಿಗೆ ವಸೂಲಿಗೂ ಈಗಿನಿಂದಲೇ ಸಿದ್ಧತೆ ನಡೆಸಿದ್ದಾರೆ. ತಮ್ಮ ಅಧೀನದ ಸಹಾಯಕ ಕಂದಾಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು ಹಿಂದಿನ ವರ್ಷಗಳ ಬಾಕಿ ತೆರಿಗೆಯನ್ನು ಆಗಸ್ಟ್‌ ಅಂತ್ಯದೊಳಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ವಲಯದಲ್ಲಿ ಹಿಂದಿನ ವರ್ಷಗಳ ₹ 150 ಕೋಟಿಗಳಷ್ಟು ತರಿಗೆ ವಸೂಲಿಗೆ ಬಾಕಿ ಇದೆ.

ಅಂಕಿ ಅಂಶ

ಬಿಬಿಎಂಪಿಯ 2020–21ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಗುರಿ₹ 2,442 ಕೋಟಿ,ಈ ಸಾಲಿನಲ್ಲಿ ತೆರಿಗೆ ಪಾವತಿಸಬೇಕಾದ ಆಸ್ತಿಗಳು20.60 ಲಕ್ಷ,ಈ ಹಿಂದಿನ ವರ್ಷಗಳ ತೆರಿಗೆ ಬಾಕಿ ವಸೂಲಾಗಬೇಕಾದುದು₹ 2500 ಕೋಟಿ,ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳು7.44 ಲಕ್ಷ.

‘ಬೇಗ ಕಟ್ಟಿದಷ್ಟು ಉಳಿತಾಯ ಜಾಸ್ತಿ’

‘ಬಿಬಿಎಂಪಿಯು ಆಸ್ತಿ ತೆರಿಗೆಗೆ ಪ್ರತಿ ತಿಂಗಳು ಶೇ 2ರಷ್ಟು ಬಡ್ಡಿ ವಿಧಿಸುತ್ತದೆ. ಒಂದು ಆಸ್ತಿಗೆ ₹ 100 ತೆರಿಗೆ ಪಾವತಿಸಬೇಕು ಎಂದಿಟ್ಟುಕೊಳ್ಳಿ. ಮೇ 31ರ ಒಳಗೆ ಅದನ್ನು ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ಸಿಗುವುದರಿಂದ ₹ 95 ಮಾತ್ರ ಪಾವತಿಸಿದರೆ ಸಾಕು. ಜೂನ್‌ ನಂತರ ಪ್ರತಿತಿಂಗಳಿಗೆ ಶೇ 2ರಂತೆ ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ. 2021ರ ಮಾರ್ಚ್‌ವರೆಗೆ ತೆರಿಗೆ ಪಾವತಿ ಮುಂದೂಡಿದರೆ, ₹ 100ಕ್ಕೆ 10 ತಿಂಗಳ ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ. ಆಸ್ತಿ ತೆರಿಗೆ ಬೇಗ ಪಾವತಿಸಿದಷ್ಟು ಉಳಿತಾಯ ಜಾಸ್ತಿ’ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.