ADVERTISEMENT

ಟಿಡಿಆರ್‌ ಅಕ್ರಮ: ₹ 27.68 ಕೋಟಿ ಲಾಭ ಮಾಡಿಕೊಂಡ ಆರೋಪಿಗಳು

₹85.24 ಲಕ್ಷ ಜಪ್ತಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 19:32 IST
Last Updated 4 ಡಿಸೆಂಬರ್ 2021, 19:32 IST
ಎಸಿಬಿ
ಎಸಿಬಿ   

ಬೆಂಗಳೂರು: ಇಲ್ಲದ ಜಮೀನು, ಕಟ್ಟಡಗಳಿಗೆಅಕ್ರಮವಾಗಿ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು ಪತ್ರ (ಟಿಡಿಆರ್‌) ಪಡೆದು ₹27.68 ಕೋಟಿಗೆ ಮಾರಾಟ ಮಾಡಿದ ದಲ್ಲಾಳಿಗಳು, ಬಿಬಿಎಂಪಿಯ ನಾಲ್ವರು ಎಂಜಿನಿಯರ್‌ಗಳು ಸೇರಿ 16 ಮಂದಿಯ ಬ್ಯಾಂಕ್‌ ಖಾತೆಯಲ್ಲಿದ್ದ ₹85.24 ಲಕ್ಷ ಮುಟ್ಟುಗೋಲು ಪ್ರಕ್ರಿಯೆ ಮುಂದುವರಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸರ್ಕಾರ ಅನುಮತಿ ನೀಡಿದೆ.

ವಾಲ್‌ ಮಾರ್ಕ್‌ ರಿಯಾಲ್ಟಿ ಹೋಲ್ಡಿಂಗ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರತನ್ ಲಾಥ್, ಬಿ.ಎಸ್. ಸುರೇಂದ್ರನಾಥ್, ಕೆ.ಗೌತಮ್, ಕೆ.ಸುರೇಶ್‌ ಮತ್ತು ಜಮೀನಿನ ಹಳೆಯ ಮಾಲೀಕರಾದ ಮುನಿರಾಜಪ್ಪ ಮತ್ತವರ ಕುಟುಂಬದ 7 ಸದಸ್ಯರು, ಬಿಬಿಎಂಪಿ ಸಹಾಯಕ ಎಂಜಿನಿಯರ್‌ಗಳಾದ ಎಂಜಿನಿಯರ್ ಕೃಷ್ಣಲಾಲ್, ಎಂ.ಎನ್.ದೇವರಾಜ್, ಜಂಟಿ ಆಯುಕ್ತ ಕೆ.ಎನ್.ದೇವರಾಜ್ ಮತ್ತು ಕಾರ್ಯಪಾಲಕ ಎಂಜಿನಿಯರ್‌ ರಾಮೇಗೌಡ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಒಟ್ಟು 25 ಖಾತೆಗಳಲ್ಲಿದ್ದ ₹85.24 ಲಕ್ಷ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಮತ್ತು ಪ್ರಮಾಣಪತ್ರ ಸಲ್ಲಿಸಲು ಅನುಮತಿ ನೀಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ADVERTISEMENT

ಏನಿದು ಪ್ರಕರಣ?: ಮುನಿರಾಜಪ್ಪ ಅವರ ತಂದೆ ರೇವಣ್ಣ ಹೆಸರಿನಲ್ಲಿ ಕೆ.ಆರ್‌.ಪುರ ಹೋಬಳಿ ಕೌದೇನಹಳ್ಳಿ ಸರ್ವೆ ನಂಬರ್ 132ರಲ್ಲಿ ಇದ್ದ ಜಾಗವನ್ನು ಅವರ ಮಕ್ಕಳು 1989ರಲ್ಲಿ 10 ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದರು. ನಿವೇಶನ ಖರೀದಿಸಿದವರು ಅಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ.

ಈ ಜಾಗವನ್ನು ಟಿ.ಸಿ. ಪಾಳ್ಯ ಮತ್ತು ಹೊರಮಾವು ರಸ್ತೆ ವಿಸ್ತರಣೆಗೆ ಗುರುತಿಸಲಾಯಿತು.

ನಿವೇಶನ ಪಡೆದು ಕಟ್ಟಡ ಕಟ್ಟಿದವರು ಆಸ್ತಿಯ ಹಾಲಿ ಮಾಲೀಕ ರಾಗಿದ್ದರೂ, ಮೂಲ ಮಾಲೀಕರಾದ ಮುನಿರಾಜಪ್ಪ ಅವರನ್ನು ರತನ್‌ ಲಾಥ್ ಮತ್ತು ಇತರ ಮಧ್ಯವರ್ತಿಗಳು ಸಂಪರ್ಕಿಸಿದರು. ಮುನಿರಾಜಪ್ಪ ಮೂಲಕ ಟಿಡಿಆರ್‌ಗೆ ಅರ್ಜಿ ಸಲ್ಲಿಸಿದರು.

‘ಮುನಿರಾಜಪ್ಪ ಅವರ ತಂದೆಯ ಹೆಸರಿನಲ್ಲಿ ಪಹಣಿ ಪಡೆದು ರೇವಣ್ಣ ಅವರ ಮರಣ‍ಪ್ರಮಾಣಪತ್ರ ಸಲ್ಲಿಸಿ ಖಾತೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಪೂರ್ವ ತಾಲ್ಲೂಕಿನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ, ಹಾಲಿ ಮಾಲೀಕರು ಬಿಬಿಎಂಪಿಗೆ ಕಂದಾಯ ಪಾವತಿಸುತ್ತಿರುವುದು ತಿಳಿದಿದ್ದರೂ ದಲ್ಲಾಳಿಗಳೊಂದಿಗೆ ಶಾಮೀಲಾಗಿ ಖಾತೆ ವರ್ಗಾವಣೆ ಮಾಡಿದ್ದಾರೆ’ ಎಂದು ಎಸಿಬಿ ತನಿಖಾಧಿಕಾರಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ವಿವರಿಸಿದ್ದರು.

‘ಖಾತೆ ವರ್ಗಾವಣೆಯಾದ ಬಳಿಕ ಮುನಿರಾಜಪ್ಪ ಮತ್ತು ಕುಟುಂಬ ದವರಿಂದ ಬ್ರೋಕರ್‌ಗಳು ಜಿಪಿಎ ಮಾಡಿಸಿಕೊಂಡಿದ್ದರು. ಅವರಿಗೆ ₹2.70 ಕೋಟಿಯನ್ನು ಚೆಕ್‌ಗಳ ಮೂಲಕ ಪಾವತಿಸಿದ್ದರು. ನಂತರ ಟಿಡಿಆರ್ ಪಡೆಯಲು ಅರ್ಜಿದಾರರ ಪರವಾಗಿ ಎಲ್ಲ ಪ್ರಕ್ರಿಯೆಗಳನ್ನು ದಲ್ಲಾಳಿಗಳೇ ಮುಂದುವರಿಸಿದ್ದರು’ ಎಂದು ಅವರು ತಿಳಿಸಿದ್ದರು.

‘ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳೂ ದಲ್ಲಾಳಿಗಳೊಂದಿಗೆ ಶಾಮೀಲಾದರು. ಜಾಗದ ನೈಜ ಮಾಲೀಕತ್ವ ಮರೆಮಾಚಿ, ರಸ್ತೆ ವಿಸ್ತರಣೆಗೆ ಒಳಪಡದ ಹಾಗೂ ಅಸ್ತಿತ್ವದಲ್ಲೇ ಇಲ್ಲದ ಕಟ್ಟಡಗಳ ಹೆಸರು ಸೇರಿಸಿದರು. ಅಲ್ಲದೇ ಒಂದು ಮಹಡಿ ಮನೆಯಷ್ಟೇ ಇದ್ದರೂ, ಮೂರು ಮಹಡಿಗಳ ಮನೆ ಇರುವಂತೆ ಸುಳ್ಳು ದಾಖಲೆ ಸೃಷ್ಟಿಸಿದರು.’

‘ಮುನಿರಾಜಪ್ಪ ಅವರಿಗೆ ವಿತರಣೆ ಯಾದ ಎರಡು ಟಿಡಿಆರ್‌ಗಳನ್ನು 12 ರಿಯಲ್ ಎಸ್ಟೇಟ್ ಕಂಪನಿಗಳಿಗೆ ದಲ್ಲಾಳಿಗಳು ಮಾರಾಟ ಮಾಡಿ, ₹27.68 ಕೋಟಿ ಲಾಭ ಮಾಡಿ ಕೊಂಡಿದ್ದರು. ಅದನ್ನು ನಾಲ್ವರು ದಲ್ಲಾಳಿಗಳು ಹಂಚಿಕೊಂಡಿದ್ದಾರೆ’ ಎಂದು ವಿವರಿಸಿದ್ದರು. ‘ರಸ್ತೆ ವಿಸ್ತರಣೆ ಮಾಡಬೇಕಾದಲ್ಲಿ ಇದೇ ಜಾಗದ ನಿವೇಶನಗಳ ಮಾಲೀಕರಿಗೆ ಮತ್ತೆ ಟಿಡಿಆರ್‌ಗಳನ್ನು ಬಿಬಿಎಂಪಿ ವಿತರಿಸಬೇಕಾಗುತ್ತದೆ. ಸರ್ಕಾರಕ್ಕೆ ವಂಚಿಸಿ ಅಕ್ರಮವಾಗಿ ಟಿಡಿಆರ್ ಪಡೆದಿರುವ ದಲ್ಲಾಳಿಗಳು, ಮುನಿ ರಾಜಪ್ಪ ಕುಟುಂಬದವರು ಮತ್ತು ಬಿಬಿಎಂಪಿ ಅಧಿಕಾರಿಗಳ ಬ್ಯಾಂಕ್‌ ಖಾತೆಗಳಲ್ಲಿರುವ ಮೊತ್ತ, ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲಿಗೆ ಅನುಮತಿ ನೀಡಬೇಕು’ ಎಂದು ಎಸಿಬಿ ಎಡಿಜಿ‍ಪಿ ಕೋರಿದ್ದರು.

ಆರೋಪಿ ಕೃಷ್ಣಲಾಲ್ ಬಡ್ತಿಗೆ ಸಿದ್ಧತೆ

‌ಟಿಡಿಆರ್ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿರುವ ಬಿಬಿಎಂಪಿ ಸಹಾಯಕ ಎಂಜಿನಿಯರ್‌ ಕೃಷ್ಣಲಾಲ್‌ ಅವರಿಗೆ ಬಡ್ತಿ ನೀಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.

‘ಸರ್ಕಾರಿ ನೌಕರರು ತನಿಖೆ ಎದುರಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಬಡ್ತಿ ನೀಡುವಂತಿಲ್ಲ. ಆದರೂ, ಹಿರಿಯ ಅಧಿಕಾರಿಯೊಬ್ಬರು ಬಡ್ತಿ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಕಡತವೂ ಸಿದ್ಧವಾಗಿದೆ’ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಆರೋಪಿಯ ಬ್ಯಾಂಕ್ ಖಾತೆಯಲ್ಲಿನ ಹಣ ಜಪ್ತಿ ಮಾಡಲು ಸರ್ಕಾರ ನೀಡಿರುವ ವಿವಿಧ ಬ್ಯಾಂಕ್‌ಗಳ 25 ಖಾತೆಗಳ ಪಟ್ಟಿಯಲ್ಲಿ ಕೃಷ್ಣಲಾಲ್ ಅವರ ಖಾತೆಯೂ ಒಳಗೊಂಡಿದೆ. ಅವರ ಖಾತೆಯಲ್ಲಿ ₹345.5 ಮಾತ್ರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.