ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪಡೆದುಕೊಳ್ಳುವ ‘ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (ಡಿಆರ್‌ಸಿ) ಅಥವಾ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಪತ್ರಗಳನ್ನು ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಯಲ್ಲಿ ಬಳಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಬಿಬಿಎಂಪಿ ವ್ಯಾಪ್ತಿಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಪಿಎ) ಸೇರಿದಂತೆ ಒಂದಕ್ಕಿಂತ ಹೆಚ್ಚು ಸ್ಥಳೀಯ ಯೋಜನಾ ಪ್ರಾಧಿಕಾರಗಳ ಪ್ರದೇಶವನ್ನು ಹೊಂದಿದೆ.
ಹೀಗಾಗಿ, ಬಿಬಿಎಂಪಿಯು 2020ರ ಜುಲೈ 27ರಂದು ಪ್ರಸ್ತಾವ ಸಲ್ಲಿಸಿ, ಡಿಆರ್‌ಸಿಗಳನ್ನು ಬಿಬಿಎಂಪಿಯ ಯಾವುದೇ ಪ್ರದೇಶದಲ್ಲಿ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿತ್ತು.
ಇದನ್ನು ಪರಿಗಣಿಸಿರುವ ಸರ್ಕಾರ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಸೆಕ್ಷನ್ 13ಕ್ಕೆ ತಿದ್ದುಪಡಿ ತಂದಿದೆ. ಇದರಿಂದ, ಬಿಬಿಎಂಪಿ ಅಥವಾ ಗ್ರೇಟರ್ ಬೆಂಗಳೂರು ಪ್ರದೇಶದ (ಜಿಬಿಎ) ವ್ಯಾಪ್ತಿ ಹಾಗೂ ಮುಂದೆ ಜಿಬಿಎಗೆ ಸೇರಿಕೊಳ್ಳುವ ಪ್ರದೇಶದಲ್ಲಿ ಡಿಸಿಆರ್ ಅಥವಾ ಟಿಡಿಆರ್ ಅನ್ನು ಬಳಸಿಕೊಳ್ಳಬಹುದು. ಇದಕ್ಕೆ ಬಿಡಿಎ, ಬಿಎಂಐಸಿಪಿಎ ಸೇರಿದಂತೆ ಯಾವುದೇ ಯೋಜನಾ ಪ್ರಾಧಿಕಾರದ ವ್ಯಾಪ್ತಿ ಅಡ್ಡಿಯಾಗುವುದಿಲ್ಲ ಎಂದು ಜೂನ್ 10ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
‘ಪೀಣ್ಯ ವಿಶೇಷ ಹೂಡಿಕೆ ವಲಯ’: ನಗರದ ಪೀಣ್ಯ 1, 2, 3 ಹಾಗೂ ನಾಲ್ಕನೇ ಹಂತದ ಕೈಗಾರಿಕಾ ಪ್ರದೇಶವನ್ನು ‘ಪೀಣ್ಯ ವಿಶೇಷ ಹೂಡಿಕೆ ವಲಯ’ವನ್ನಾಗಿ ಹೆಸರಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆದೇಶಿಸಿದೆ.
ನೆಲಗೆದರನಹಳ್ಳಿ, ಲಗ್ಗೆರೆ, ಚೊಕ್ಕಸಂದ್ರ, ಪೀಣ್ಯದ ಹಲವು ಸರ್ವೆ ನಂಬರ್‌ಗಳಲ್ಲಿ 1,416 ಎಕರೆ ವ್ಯಾಪ್ತಿಯಲ್ಲಿರುವ ಪೀಣ್ಯ ಕೈಗಾರಿಕೆ ಪ್ರದೇಶವನ್ನು, ಕರ್ನಾಟಕ ವಿಶೇಷ ಹೂಡಿಕೆ ವಲಯ ಕಾಯ್ದೆ– 2022ರಂತೆ ‘ಪೀಣ್ಯ ವಿಶೇಷ ಹೂಡಿಕೆ ವಲಯ’ವನ್ನಾಗಿ ನಿಗದಿಪಡಿಸಲಾಗಿದೆ. ಈ ವಲಯಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯನ್ನು (ಕೆಐಎಡಿಬಿ) ‘ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ’ವನ್ನಾಗಿಸಿ ಆದೇಶಿಸಲಾಗಿದೆ.
‘ಪೀಣ್ಯ ವಿಶೇಷ ಹೂಡಿಕೆ ವಲಯ’ವನ್ನು ಕೈಗಾರಿಕಾ ಟೌನ್‌ಶಿಪ್ ಆಗಿ ಪರಿಗಣಿಸಲಾಗಿದ್ದು, ಎಲ್ಲ ರೀತಿಯ ನಿರ್ವಹಣೆಯನ್ನು ಕೆಐಎಡಿಬಿಗೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.