ADVERTISEMENT

ರಾಜೇಶ್‌ ಡೈರಿ ಭೇದಿಸುತ್ತಿರುವ ಎಸಿಬಿ

ಕಾಟನ್‌ಪೇಟೆ ಮಹಿಳಾ ಸಹಕಾರ ಬ್ಯಾಂಕ್‌ನಲ್ಲಿ 174 ಖಾತೆ!

​ಪ್ರಜಾವಾಣಿ ವಾರ್ತೆ
Published 18 ಮೇ 2019, 19:56 IST
Last Updated 18 ಮೇ 2019, 19:56 IST

ಬೆಂಗಳೂರು: ‘ಅಭಿವೃದ್ಧಿ ಹಕ್ಕು ವರ್ಗಾವಣೆ’ (ಟಿಡಿಆರ್‌) ವಂಚನೆ ಪ್ರಕರಣದ ಪ್ರಮುಖ ಮಧ್ಯವರ್ತಿ ರಾಜೇಶ್‌ ಕುಮಾರ್‌ ಅಲಿಯಾಸ್‌ ರಾಕೇಶ್‌ ನಿಂಬಾಜಿಯಾ ಮತ್ತು ಅವರ ಕೆಲವು ಆಪ್ತರು ಕಬ್ಬನ್‌ಪೇಟೆ ಮಹಿಳಾ ಸಹಕಾರಿ ಬ್ಯಾಂಕ್‌ನಲ್ಲಿ 174 ಖಾತೆಗಳನ್ನು ತೆರೆದು ವಹಿವಾಟು ನಡೆಸಿದ್ದಾರೆ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಮಹಿಳಾ ಸಹಕಾರಿ ಬ್ಯಾಂಕ್‌ ಹಾಗೂ ರಾಜೇಶ್‌ ಮನೆ ಮೇಲೆ ನಡೆದ ದಾಳಿ ಸಮಯದಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಿದಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಟಿಡಿಆರ್‌ಗೆ ಸಂಬಂಧಿಸಿದ 174 ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ. ಇದೊಂದೇ ಬ್ಯಾಂಕಿನಲ್ಲಿ 2009ರಿಂದ 2017ರವರೆಗೆ ₹ 100 ಕೋಟಿಗೂ ಅಧಿಕ ವಹಿವಾಟು ನಡೆದಿದೆ.

‘ನಿಮ್ಮ ಗ್ರಾಹಕರನ್ನು ಅರಿಯಿರಿ’ (ನೊ ಯುವರ್‌ ಕಸ್ಟಮರ್‌– ಕೆವೈಸಿ) ನಿಯಮದಡಿ ಹೊಸ ಖಾತೆ ತೆರೆಯಲು ಆಧಾರ್‌, ಪ್ಯಾನ್‌ ಕಾರ್ಡ್‌, ಫೋಟೋ ಮತ್ತಿತರ ದಾಖಲೆಗಳು ಕಡ್ಡಾಯ. 2012ರಲ್ಲಿ ‘ಕೋರ್ ಬ್ಯಾಂಕಿಂಗ್‌’ ಜಾರಿ ಬಳಿಕ ಖಾತೆ ತೆರೆಯುವ ಪ್ರಕ್ರಿಯೆ ಬಿಗಿಗೊಂಡಿದೆ. ಆದರೆ, ಕಬ್ಬನ್‌ಪೇಟೆ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ ಕೇವಲ ‘ಅಭಿವೃದ್ಧಿ ಹಕ್ಕು ಪತ್ರ’ದ (ಡಿಆರ್‌ಸಿ) ಮೇಲೆ ಖಾತೆಗಳನ್ನು ತೆರೆಯಲಾಗಿದೆ.

ADVERTISEMENT

ಒಂದೊಂದು ಡಿಆರ್‌ಸಿಗೂ ಒಂದೊಂದು ಖಾತೆ ತೆರೆಯಲಾಗಿದೆ. ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಕಟ್ಟಡ ಮತ್ತು ನಿವೇಶನಗಳ ಮಾಲೀಕರಿಗೆ ಕೊಟ್ಟ ಚೆಕ್‌ ನಗದೀಕರಿಸಿಕೊಂಡ ಬಳಿಕ ಖಾತೆಗಳು ನಿಷ್ಕ್ರಿಯಗೊಂಡಿವೆ. ಈ ವ್ಯವಹಾರದಲ್ಲಿ ಬ್ಯಾಂಕ್‌ ಅಧಿಕಾರಿಗಳ ಪಾತ್ರವಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಎಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.