ADVERTISEMENT

ಬಂಧನ ಭೀತಿ: ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಪತ್ನಿ ಪರಾರಿ

ಆರೋಪಿಗಳು ಹೊರ ರಾಜ್ಯಕ್ಕೆ ತೆರಳಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 16:35 IST
Last Updated 12 ಡಿಸೆಂಬರ್ 2024, 16:35 IST
ಅತುಲ್ ಸುಭಾಷ್
ಅತುಲ್ ಸುಭಾಷ್   

ಬೆಂಗಳೂರು: ಸಾಫ್ಟ್​​ವೇರ್ ಎಂಜಿನಿಯರ್‌​ ಅತುಲ್ ಸುಭಾಷ್ (34) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶಕ್ಕೆ ತೆರಳಿರುವ ಮಾರತ್‌ಹಳ್ಳಿ ಠಾಣೆ ಪೊಲೀಸರ ತಂಡ‌, ಆರೋಪಿಗಳಿಗಾಗಿ ಹುಡುಕಾಟ ನಡೆಸಿದೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಜ್ಞಾನದೇವ್ ನೇತೃತ್ವದ ತಂಡ ಜೌನಾಪುರ ತಲುಪಿದೆ. ಆದರೆ, ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ಅವರು ತಮ್ಮ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ನಿಶಾ ಮತ್ತು ಅನುರಾಗ್ ಅವರು ಬೈಕ್‌ನಲ್ಲಿ ತೆರಳಿದರು ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳು ಹೊರ ರಾಜ್ಯಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ. ಮೊದಲು ನೋಟಿಸ್ ಜಾರಿಗೊಳಿಸಿ ಮೃತನ ಪತ್ನಿಯ ವಿಚಾರಣೆ ನಡೆಸಲಾಗುವುದು. ವಿಚಾರಣೆಗೆ ಸಹಕರಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ಬಳಿಕ ಬಿಹಾರಕ್ಕೆ ತೆರಳಲಿರುವ ಪೊಲೀಸರು, ಅತುಲ್ ಸುಭಾಷ್ ಅವರ ಪೋಷಕರು, ಸಹೋದರನಿಂದ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಅತುಲ್ ವಿರುದ್ಧ ನಿಖಿತಾ 9 ಪ್ರಕರಣಗಳನ್ನು ದಾಖಲಿಸಿದ್ದಳು. ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ಬೆಂಗಳೂರಿನಿಂದ ಜೌನಾ​ಪುರಕ್ಕೆ 40 ಬಾರಿ ಹೋಗಿದ್ದ, ಆಕೆಯ ಮನೆಯವರಿಂದ ತುಂಬಾ ಕಷ್ಟಪಟ್ಟಿದ್ದ’ ಎಂದು ಅತುಲ್ ಪೋಷಕರು ಆರೋಪಿಸಿದ್ದಾರೆ.

ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್​​ ಹಳ್ಳಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಎಫ್ಐಆರ್ ದಾಖಲಾಗಿದೆ.

‘ಅತುಲ್ ಸುಭಾಷ್, ನಿಖಿತಾ ಸಿಂಘಾನಿಯಾಗೆ 2019ರಲ್ಲಿ ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗು ಇದೆ. ಆದರೆ ತನ್ನ ತಾಯಿ ಹಾಗೂ ಸಹೋದರನ ಕುಮ್ಮಕ್ಕಿನಿಂದ ಅತುಲ್ ವಿರುದ್ಧ ನಿಕಿತಾ ಸುಳ್ಳು ದೂರು ದಾಖಲಿಸಿದ್ದಳು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಅತುಲ್ ಸುಭಾಷ್‌ಗೆ ಪುತ್ರನ ಭೇಟಿಗೂ ಅವಕಾಶ ನೀಡದೆ ₹ 30 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಅಲ್ಲದೆ, ಪ್ರಕರಣದ ನ್ಯಾಯಾಲಯದ ಕಲಾಪಗಳಿಗೆ ಅತುಲ್ ಸುಭಾಷ್ ಹಾಜರಾದ ಸಂದರ್ಭದಲ್ಲಿ, ‘₹3 ಕೋಟಿ ಕೊಡು, ಇಲ್ಲದಿದ್ದರೆ ಬದುಕಿರಬೇಡ' ಎಂದು ಅಣಕಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದು ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಕಾಸ್ ಕುಮಾರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನ್ಯಾಯಕ್ಕಾಗಿ ಆಗ್ರಹ

ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲೂ #JusticeForAtulSubhash ಮತ್ತು #BengaluruSuicideCase ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲೂ ಬಳಕೆದಾರರು ನ್ಯಾಯಕ್ಕಾಗಿ ಬೇಡಿಕೆ ಇರಿಸಿದ್ದಾರೆ. ಭಾರತದಲ್ಲಿ ನ್ಯಾಯ ವ್ಯವಸ್ಥೆಯು ಹದಗೆಟ್ಟಿದ್ದು ನ್ಯಾಯಾಂಗ ವ್ಯವಸ್ಥೆಯೇ ಸಂಪೂರ್ಣವಾಗಿ ಬದಲಾಗಬೇಕಿದೆ ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.   ಅತುಲ್ ಸುಭಾಷ್ ಅವರ ಪತ್ನಿಯನ್ನು ಕೆಲಸದಿಂದ ತೆಗೆದು ಹಾಕುವಂತೆಯೂ ಬೇಡಿಕೆ ಬಲವಾಗಿ ಕೇಳಿಬಂದಿದೆ. ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ ಮಾಡಿದ್ದ 90 ನಿಮಿಷಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ರಾಷ್ಟ್ರಪತಿ, ನ್ಯಾಯಮೂರ್ತಿಗೆ ಇ–ಮೇಲ್

ಅತುಲ್ ಸುಭಾಷ್ ಅವರು ಆತ್ಮಹತ್ಯೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗೆ ಇ-ಮೇಲ್ ಕಳುಹಿಸಿದ್ದರು ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.  ‘ಡಿಸೆಂಬರ್ 9ರಂದು ರಾತ್ರಿ 1.31ಕ್ಕೆ ಅತುಲ್ ಅವರು​ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗೆ ಇ-ಮೇಲ್​ ಕಳುಹಿಸಿದ್ದು ‘ನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ. ಮನಸ್ಸು ಮಾಡಿದರೆ ದೇಶದಲ್ಲಿ‌ ಬದಲಾವಣೆ ತರಬಹುದು’ ಎಂದು ಉಲ್ಲೇಖಿಸಿದ್ದಾರೆ.  ‘ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸೆಕ್ಷನ್‌ಗಳನ್ನು ಹಾಕಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆ ತರಬೇಕು ಎಂಬ ವಿಚಾರವನ್ನು ತಿಳಿಸಿದ್ದಾರೆ’  ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.