ADVERTISEMENT

ಚುನಾವಣಾ ಕಚೇರಿ ತೆರೆದ ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:53 IST
Last Updated 3 ಏಪ್ರಿಲ್ 2019, 19:53 IST
ಕಚೇರಿ ಉದ್ಘಾಟನೆ ವೇಳೆ ಧಾರ್ಮಿಕ ವಿಧಿಯಲ್ಲಿ ತೊಡಗಿರುವ ತೇಜಸ್ವಿ ಸೂರ್ಯ
ಕಚೇರಿ ಉದ್ಘಾಟನೆ ವೇಳೆ ಧಾರ್ಮಿಕ ವಿಧಿಯಲ್ಲಿ ತೊಡಗಿರುವ ತೇಜಸ್ವಿ ಸೂರ್ಯ   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಚುನಾವಣಾ ಕಾರ್ಯಾಲಯ ಬುಧವಾರ ಉದ್ಘಾಟನೆಗೊಂಡಿತು.

ಬಸವನಗುಡಿಯ ಅಂಚೆ ಕಚೇರಿಯ ಹಿಂಭಾಗದಲ್ಲಿರುವ ಮನೆಯಲ್ಲಿ ಪೂಜೆ, ಹೋಮ ಹವನವನ್ನು ನೆರೆವೇರಿಸುವ ಮೂಲಕ ತೇಜಸ್ವಿ ಚುನಾವಣಾ ಕಾರ್ಯಾಲಯವನ್ನು ಆರಂಭಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಭಾಗವಹಿಸಿದ್ದರು. ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು, ಪಾಲಿಕೆ ಸದಸ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್ ಹೆಸರನ್ನು ಪಕ್ಷದ ರಾಜ್ಯ ಘಟಕ ಶಿಫಾರಸು ಮಾಡಿತ್ತು. ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದ ತೇಜಸ್ವಿನಿ ಅವರು ಚುನಾವಣಾ ಕಚೇರಿ ತೆರೆದು ಪ್ರಚಾರ ಆರಂಭಿಸಿದ್ದರು. ಈ ಕಾರ್ಯಕ್ರಮದಲ್ಲಿ ಆರ್‌.ಅಶೋಕ್‌ ಸೇರಿದಂತೆ ಬಿಜೆಪಿ ಶಾಸಕರು ಪಾಲ್ಗೊಂಡಿದ್ದರು.

ADVERTISEMENT

ಧರ್ಮ, ಜಾತಿ ಮೀರಿದ ಚುನಾವಣೆ:ಬಸವನಗುಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಜೈನ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ, ಭಾರತದಲ್ಲಿ ಇದೇ ಮೊದಲ ಬಾರಿಗೆ ಧರ್ಮ, ಜಾತಿ, ಭಾಷೆಯನ್ನು ಮೀರಿ, ಅಭಿವೃದ್ಧಿಯೇ ಮಾನದಂಡವಾಗಿ ಚುನಾವಣೆ ನಡೆಯುತ್ತಿದೆ’ ಎಂದರು.

ತೇಜಸ್ವಿ ಸೂರ್ಯಗೆ ಮಹಿಳಾ ಆಯೋಗದಿಂದ ಸಮನ್ಸ್‌

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಟ್ವೀಟ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿಂತೆ ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗ, ಇದೇ 8ರಂದು ವಿಚಾರಣೆಗೆ ಹಾಜರಾಗಲು ತೇಜಸ್ವಿಗೆ ಸಮನ್ಸ್ ಜಾರಿ ಮಾಡಿದೆ.

ಪ್ರದೇಶ ಮಹಿಳಾ ಕಾಂಗ್ರೆಸ್ ನೀಡಿದ್ದ ದೂರು ಆಧರಿಸಿ ನೋಟಿಸ್ ಜಾರಿ ಮಾಡಿ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಆಯೋಗ ತಿಳಿಸಿತ್ತು. ಆದರೆ, ತೇಜಸ್ವಿ ಸೂರ್ಯ ಅವರಿಗೆ ನೋಟಿಸ್‌ ತಲುಪಿಯೇ ಇರಲಿಲ್ಲ. ‘ನೋಟಿಸ್‌ ಬರದಿದ್ದ ಕಾರಣ ಹಾಜರಾಗಿಲ್ಲ’ ಎಂದು ಅವರ ಪರ ವಕೀಲರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ‘ಗಿರಿನಗರ ಪೊಲೀಸರು ನೋಟಿಸ್‌ ತಲುಪಿಸಿರಲಿಲ್ಲ. ಹೀಗಾಗಿ ಮತ್ತೊಂದು ದಿನಾಂಕ ನಿಗದಿ ಮಾಡಿ ಸಮನ್ಸ್ ಜಾರಿ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.