ಬೆಂಗಳೂರು: ‘ಶ್ರೀ ಕೃಷ್ಣದೇವರಾಯರು ಸ್ವತಃ ಬಹುಭಾಷಾ ಪಂಡಿತರಾಗಿ, ತೆಲುಗು ಮತ್ತು ಕನ್ನಡಕ್ಕೆ ಸ್ವರ್ಣಯುಗ ತಂದ ಮಹನೀಯ’ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.
ತೆಲುಗು ವಿಜ್ಞಾನ ಸಮಿತಿ ಆಯೋಜಿಸಿದ್ದ 512ನೇ ಶ್ರೀ ಕೃಷ್ಣ ದೇವರಾಯರ ಪಟ್ಟಾಭಿಷೇಕ ಮಹೋತ್ಸವ ಮತ್ತು ತೆಲುಗು ವಿಜ್ಞಾನ ಸಮಿತಿಯ 70ನೇ ಸಂಸ್ಥಾಪನಾ ದಿನೋತ್ಸವದ ಕಾರ್ಯಕ್ರಮದಲ್ಲಿ ಅವರುಆನ್‌ಲೈನ್ ಮೂಲಕ ಸಂದೇಶ ನೀಡಿದರು.
‘ಅಮುಕ್ತ ಮೌಲ್ಯದ’ ಎಂಬ ಗ್ರಂಥ ಬರೆದು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದರು. ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ರೈತರಿಗೆ ನೆರವಾದ ಜನಪ್ರಿಯ ನಾಯಕರವರು’ ಎಂದು ಬಣ್ಣಿಸಿದರು.
‘ಕೃಷ್ಣದೇವರಾಯರು ತೆಲುಗು, ಕನ್ನಡದಲ್ಲಿ ಪ್ರಾವಿಣ್ಯತೆ ಹೊಂದಿದ್ದರು. ಎರಡೂ ಭಾಷೆಗಳಲ್ಲಿ ಮತ್ತು ಭಾಷಿಕರ ಬಗ್ಗೆ ಅಭಿಮಾನ ಹೊಂದಿದ್ದರು’ ಎಂದು ಸಮಿತಿ ಅಧ್ಯಕ್ಷ ಡಾ. ಎ.ರಾಧಾಕೃಷ್ಣ ರಾಜು ಹೇಳಿದರು.
‘ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚುತ್ತದೆ. ತಮಿಳುನಾಡಿನಲ್ಲಿ ದ್ವಿಭಾಷಾ ಸೂತ್ರ ಅನುಸರಿಸಲಾಗುತ್ತಿದೆ. ತೆಲುಗು ಮತ್ತು ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಮಾತೃಭಾಷೆಯಲ್ಲಿ ಅವರು ಶಿಕ್ಷಣ ಪಡೆದರೂ 10ನೇ ತರಗತಿ ಪರೀಕ್ಷೆ ಬರೆಯಲು ತಮಿಳುನಾಡು ಸರ್ಕಾರ ಅನುಮತಿ ನೀಡುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ತೆಲುಗು ಮತ್ತು ಕನ್ನಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ದೊರಕಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.