ಬೆಂಗಳೂರು: ಶ್ರೀರಾಮಪುರದ ಬಳಿಯ ಭಾಷ್ಯಂ ನಗರದಲ್ಲಿರುವ ಅರಳಿಮರ ಗಂಗಯ್ಯಮ್ಮನ ದೇವಸ್ಥಾನವನ್ನು ಕೆಡವಲು ಮುಂದಾದ ಬಿಬಿಎಂಪಿ ಅಧಿಕಾರಿಗಳಿಗೆ ಭಕ್ತರು ಮಂಗಳವಾರ ಅಡ್ಡಿಪಡಿಸಿದರು. ಜನರ ಪ್ರತಿರೋಧಕ್ಕೆ ಮಣಿದು ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದೂಡಿದರು.
ಭಾಷ್ಯಂ ನಗರದ ಅರಳಿಕಟ್ಟೆ ಬಳಿ ಹತ್ತಾರು ವರ್ಷಗಳಿಂದ ವಿವಿಧ ದೇವರ ಚಿಕ್ಕ ಚಿಕ್ಕ ವಿಗ್ರಹಗಳಿದ್ದವು. ಅವುಗಳಿಗೆ ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದರು. 10 ವರ್ಷಗಳ ಹಿಂದೆ ಸ್ಥಳೀಯ ಪಾಲಿಕೆ ಸದಸ್ಯರು ಅಲ್ಲೊಂದು ಪುಟ್ಟ ಗುಡಿ ಕಟ್ಟಿಸಿಕೊಟ್ಟಿದ್ದರು. ಶಿಥಿಲಗೊಂಡಿದ್ದ ಆ ಗುಡಿಯನ್ನು ಕೆಡವಿ ವರ್ಷದ ಹಿಂದೆ ಅಲ್ಲಿ ಪುಟ್ಟ ದೇವಸ್ಥಾನವನ್ನು ನಿರ್ಮಿಸಲಾಗಿತ್ತು.
ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುವುದಕ್ಕೆ ಕೆಲವು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ದೇವಸ್ಥಾನ ನಿರ್ಮಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ದೇವಸ್ಥಾನವನ್ನು ಕೆಡಹುವಂತೆ ಹೈಕೋರ್ಟ್ ಆದೇಶ ಮಾಡಿತ್ತು. ಹೈಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಆಗ ಸ್ಥಳದಲ್ಲಿ ಸೇರಿದ ನೂರಾರು ಭಕ್ತರು ದೇವಸ್ಥಾನ ಕೆಡವದಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.