ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಮುಜರಾಯಿ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತ ಮಾಡಬೇಕು ಎಂದು ಪೇಜಾವರ ಸ್ವಾಮೀಜಿ ಅಜ್ಞಾನದಿಂದ, ಯಾವುದೋ ಆವೇಶದಲ್ಲಿ ಹೇಳುತ್ತಿದ್ದಾರೆ. ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣ ಮಾಡಬಾರದು’ ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಇ. ರಾಧಾಕೃಷ್ಣ ತಿಳಿಸಿದರು.
‘ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿಯವರು ಕೆಲವು ಬಾರಿ ಈ ಬಗ್ಗೆ ಮಾತನಾಡಿದ್ದಾರೆ. ರಾಜಾಧಿರಾಜರ ಕಾಲದಿಂದ ಸರ್ಕಾರಿ ಆಡಳಿತದ ಸುಪರ್ದಿಯಲ್ಲೇ ಇರುವ ದೇವಸ್ಥಾನಗಳನ್ನು ಖಾಸಗಿಯವರ ಕೈಗೆ ನೀಡುವುದು ಸರಿಯಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುತ್ತೇವೆ. ಅದಕ್ಕಾಗಿ ನಮ್ಮ ಸುಪರ್ದಿಗೆ ಒಪ್ಪಿಸಿ ಎಂದು ಕೆಲವು ದೊಡ್ಡ ಮಠಗಳವರು ಹೇಳುವುದು ಕೂಡ ಸರಿಯಲ್ಲ. ಅವರಿಗೆ ಅಭಿವೃದ್ಧಿ ಮಾಡಲು ಮನಸ್ಸಿದ್ದರೆ ಖಂಡಿತ ಅವಕಾಶ ಇದೆ. ಆದರೆ, ಅದಕ್ಕಾಗಿ ದೇವಸ್ಥಾನದ ಮಾಲೀಕತ್ವ ಕೇಳಬಾರದು’ ಎಂದು ಹೇಳಿದರು.
‘ಹಿಂದೆ ಆದಿಚುಂಚನಗಿರಿ ಮಠದವರು ‘ಸಿ’ ಶ್ರೇಣಿಯ ದೇವಸ್ಥಾನಗಳನ್ನು ಕೇಳಿದ್ದರು. ನಾವು ವಿರೋಧಿಸಿದ್ದೆವು. ಮುಂದೆಯೂ ಮುಜರಾಯಿ ದೇವಸ್ಥಾನಗಳು ಸರ್ಕಾರದ ಅಡಿಯಲ್ಲೇ ಇರಬೇಕು’ ಎಂದು ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.