ADVERTISEMENT

ದಶಪಥ ರಸ್ತೆ ನಿರ್ಮಾಣ ತೊಡಕು ನಿವಾರಣೆ:ಕೆಂಪೇಗೌಡ ಬಡಾವಣೆ ಮೂಲಕ ಹಾದು ಹೋಗುವ ರಸ್ತೆ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಕ ಹಾದು ಹೋಗುವ ರಸ್ತೆ

ನವೀನ್‌ ಮಿನೇಜಸ್‌
Published 3 ಮಾರ್ಚ್ 2025, 0:29 IST
Last Updated 3 ಮಾರ್ಚ್ 2025, 0:29 IST
ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಕ ಹಾದು ಹೋಗುವ ದಶಪಥ ಮಾರ್ಗ
ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಕ ಹಾದು ಹೋಗುವ ದಶಪಥ ಮಾರ್ಗ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಕ ಹಾದು ಹೋಗುವ ದಶ ಪಥ ಎಕ್ಸ್‌ಪ್ರೆಸ್‌ ರಸ್ತೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದು ದಶಕದ ನಂತರ ಮತ್ತೆ ಜೀವ ಪಡೆದಿದೆ. 200 ಶೆಡ್‌ಗಳನ್ನು ತೆರವುಗೊಳಿಸುವ ಮೂಲಕ ಸಂಪರ್ಕ ಕಲ್ಪಿಸಲು ಇದ್ದ ತೊಡಕನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವಾರಣೆ ಮಾಡಿದೆ.

ನೈಸ್‌ ರಸ್ತೆಗೆ ಸಮಾನಾಂತರವಾಗಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಆದರೆ, ಶೆಡ್‌ ಮತ್ತು ಇತರ ಕಟ್ಟಡಗಳು ಇದ್ದಿದ್ದರಿಂದ ಮಧ್ಯದಲ್ಲಿ ಒಂದು ಕಿ.ಮೀ. ಸಂಪರ್ಕ ಇಲ್ಲದಂತಾಗಿತ್ತು. ತಡೆ ನಿವಾರಣೆಯಾಗಿರುವುದರಿಂದ 10.5 ಕಿ.ಮೀ. ಉದ್ದದ ಟೋಲ್‌ ರಹಿತ ಎಕ್ಸ್‌ಪ್ರೆಸ್‌ ಹೈವೆ ನಿರ್ಮಾಣಗೊಳ್ಳಲಿದೆ. ಚಲ್ಲಘಟ್ಟದ ಬಳಿ 250 ಮೀಟರ್‌ ಉದ್ದದ ಸುರಂಗ ರಸ್ತೆ ನಿರ್ಮಾಣಗೊಳ್ಳಲಿದೆ. ಜೊತೆಗೆ ರೈಲ್ವೆ ಕೆಳಸೇತುವೆ ಕೂಡ ಇರಲಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ ಒಂಬತ್ತು ಬ್ಲಾಕ್‌ಗಳನ್ನು ಸಂಪರ್ಕಿಸುವ ಈ ರಸ್ತೆಯು ಕಾರ್ಯಾರಂಭಗೊಂಡರೆ ಬಡಾವಣೆಯಲ್ಲಿ ನಿವೇಶನ ಹೊಂದಿರುವವರು ಮನೆಗಳ ನಿರ್ಮಾಣ ಮಾಡಲು ಉತ್ತೇಜನ ದೊರೆಯಲಿದೆ.

ADVERTISEMENT

ಬಡಾವಣೆಯಲ್ಲಿ ಒಂದು ಕಿಲೋ ಮೀಟರ್‌ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಶೇ 80ರಷ್ಟು ಕಾಮಗಾರಿ ನಡೆದಿತ್ತು. ಪ್ರಮುಖ ಪ್ರದೇಶಗಳಾದ ಮಾಚೋಹಳ್ಳಿ, ಸೂಲಿಕೆರೆ, ಕನ್ನಹಳ್ಳಿ ಮತ್ತು ಚಲ್ಲಘಟ್ಟದಲ್ಲಿ ಭೂಸ್ವಾಧೀನ ಸಮಸ್ಯೆಯಿಂದಾಗಿ ಯೋಜನೆಯು ಹಿನ್ನಡೆಯನ್ನು ಅನುಭವಿಸಿತ್ತು.

‘ಹತ್ತು ಪಥದ ಎಕ್ಸ್‌ಪ್ರೆಸ್‌ವೇಯಿಂದ ಮಾಗಡಿ ರಸ್ತೆಗೆ ಸಂಪರ್ಕಿಸುವ ಮಾರ್ಗದ ಕಾಮಗಾರಿ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೈಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದ ನಂತರ, ನಾವು ಕೇವಲ ನಾಲ್ಕು ದಿನಗಳಲ್ಲಿ ಸುಮಾರು 200 ಕಟ್ಟಡಗಳನ್ನು ತೆರವುಗೊಳಿಸಿದ್ದೇವೆ. ಆದರೆ, ಅದಕ್ಕಿಂತ ಮೊದಲು ಕಾನೂನು ಹೋರಾಟದಲ್ಲಿ ಎರಡು ವರ್ಷಗಳು ಕಳೆದುಹೋದವು’ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಿಡಿಎ ಇತ್ತೀಚೆಗೆ ಕನ್ನಹಳ್ಳಿ ಬಳಿ ಸುಮಾರು 1 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೂ ಸಮಸ್ಯೆಗಳು ಇನ್ನೂ ಪೂರ್ಣ ದೂರವಾಗಿಲ್ಲ. ಸೂಲಿಕೆರೆಯಲ್ಲಿ ಸುಮಾರು 4 ಎಕರೆ ಅರಣ್ಯ ಜಮೀನು ಪ್ರಾಧಿಕಾರಕ್ಕೆ ಹಸ್ತಾಂತರವಾಗಬೇಕಿದೆ.

₹ 585 ಕೋಟಿ ವೆಚ್ಚದ ಈ ಯೋಜನೆ ‍ಪೂರ್ಣಗೊಳ್ಳಬೇಕಿದ್ದರೆ ಜಮೀನು ಹಸ್ತಾಂತರವಾಗಬೇಕು. ಅರಣ್ಯ ಇಲಾಖೆಯಿಂದ ತಡವಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಗಮನಕ್ಕೆ ತಂದಿದ್ದರು. ಶೀಘ್ರದಲ್ಲಿಯೇ ಅರಣ್ಯ ಜಮೀನು ಹಸ್ತಾಂತರಿಸಲಾಗುವುದು ಎಂದು ಅರಣ್ಯ ಸಚಿವರು ಇತ್ತೀಚೆಗೆ ನಡೆದ ಸಭೆಯಲ್ಲಿ ಭರವಸೆ ನೀಡಿದ್ದರು.

‘ಜಮೀನು ಹಸ್ತಾಂತರದ ನಿರೀಕ್ಷೆಯಲ್ಲಿದ್ದೇವೆ’ ಎಂದು ಬಿಡಿಎ ಎಂಜಿನಿಯರ್‌ ತಿಳಿಸಿದ್ದಾರೆ.

ಪರಿಹಾರ ನೀಡದೇ ಮನೆ ನೆಲಸಮ !

ಚಲ್ಲಘಟ್ಟದಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಬಿಡಿಎ ಕೈಗೆತ್ತಿಕೊಂಡಿತ್ತು. ಯಾವುದೇ ಪರಿಹಾರ ಪರ್ಯಾಯ ಜಮೀನು ನೀಡದೇ ಮೂರು ಮನೆಗಳನ್ನು ನೆಲಸಮ ಮಾಡಿತ್ತು. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಟಿ. ಸೋಮಶೇಖರ್‌ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡಗಳನ್ನು ನೆಲಸಮಗೊಳಿಸುವ ಮೊದಲು ಅವರಿಗೆ ಪರ್ಯಾಯ ಜಾಗ ತೋರಿಸಬೇಕು ಎಂದು ಅವರು ಭೂಸ್ವಾಧೀನ ಅಧಿಕಾರಿಗಳಿಗೆ ಸೂಚಿಸಿದರು. ರೈಲ್ವೆ ಕೆಳಸೇತುವೆಗೆ ನಮ್ಮ ಮೆಟ್ರೊ ಸುರಂಗ ರಸ್ತೆ ಸಂಪರ್ಕವನ್ನು ಕಲ್ಪಿಸುತ್ತಿದೆ. ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಮೂರು ತಿಂಗಳು ಬೇಕಾಗಬಹುದು. ಅದೇ ಸಮಯದಲ್ಲಿ ಮೆಟ್ರೊ ಸುರಂಗ ಮಾರ್ಗವೂ ಪೂರ್ಣಗೊಳ್ಳಬೇಕು. ಆನಂತರ ಮೈಸೂರು ಕಡೆಗೆ ಇದು ಬೈಪಾಸ್‌ ಆಗಿ ಕಾರ್ಯನಿರ್ವಹಿಸಲಿದೆ ಎಂದು ಎಂಜಿನಿಯರ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.