ADVERTISEMENT

ಬೆಂಗಳೂರು: ಹತ್ತು ಮಂದಿಗೆ ‘ಗ್ಯಾರಂಟಿ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:04 IST
Last Updated 20 ಮೇ 2025, 14:04 IST
ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರು ನಾದಸ್ವರ ವಾದನ ಪ್ರಸ್ತುತಪಡಿಸಿದರು    –ಪ್ರಜಾವಾಣಿ ಚಿತ್ರ  
ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರು ನಾದಸ್ವರ ವಾದನ ಪ್ರಸ್ತುತಪಡಿಸಿದರು    –ಪ್ರಜಾವಾಣಿ ಚಿತ್ರ     

ಬೆಂಗಳೂರು: ಕರ್ನಾಟಕ ರಾಜ್ಯ ಸವಿತಾ ಸಮಾಜ ಹೋರಾಟ ಸಮಿತಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಾದಸ್ವರ ಕಲಾವಿದರು ಸೇರಿ ಹತ್ತು ಮಂದಿಗೆ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎಂಟನೇ ವರ್ಷಕ್ಕೆ ಪದಾರ್ಪಣೆ ಮಾಡಿರುವುದು ಹಾಗೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಎರಡು ವರ್ಷಗಳನ್ನು ಪೂರೈಸಿದ ಸಂಭ್ರಮದ ಪ್ರಯುಕ್ತ ಸಮಿತಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪುರಭವನದ ಮುಂಭಾಗ ಮಂಗಳವಾದ್ಯವನ್ನು ನುಡಿಸಿ, ಬಳಿಕ ಅಲ್ಲಿಂದ ಕನ್ನಡ ಭವನದ ನಯನ ಸಭಾಂಗಣದವರೆಗೆ ಮೆರವಣಿಗೆ ಮಾಡಲಾಯಿತು. 

ನಾದಸ್ವರ ವಿದ್ವಾಂಸ ವಿ. ನಾರಾಯಣಸ್ವಾಮಿ, ಕ್ರೀಡಾಪಟು ಟಿ.ಆರ್. ತಾರಾಬಾಯಿ, ಡೋಲು ಕಲಾವಿದ ವಿ. ಗಜೇಂದ್ರ, ಕಲಾವಿದರಾದ ನಾರಾಯಣಸ್ವಾಮಿ, ವಿ. ನಾದ ನಾರಾಯಣಸ್ವಾಮಿ, ನಾದಸ್ವರ ಕಲಾವಿದರಾದ ಎನ್. ದಕ್ಷಿಣಾಮೂರ್ತಿ, ವಿ. ಮಂಜುನಾಥ್, ಡೋಲು ಕಲಾವಿದ ಆರ್. ನಾಗರಾಜು, ತಿರುಮಲ ತಿರುಪತಿ ದೇವಸ್ಥಾನದ ವಿದ್ವಾಂಸ ಬಿ. ಗೋಪಿನಾಥ್ ಹಾಗೂ ಸವಿತಾ ಸಮಾಜದ ಹೋರಾಟಗಾರ ಜಿ.ಪ್ರಕಾಶ್ ಅವರಿಗೆ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. 

ADVERTISEMENT

ಸವಿತಾ ಸಮಾಜದ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕ ಎಂ.ಎಸ್. ಮುತ್ತುರಾಜ್, ‘ಸಮುದಾಯದವರು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರುತ್ತಿಲ್ಲ. ಸಿಕ್ಕ ಅವಕಾಶಗಳನ್ನು ಸಮುದಾಯದವರು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

‘ಯಾವುದೇ ಕೆಲಸದಲ್ಲಿ ಮೇಲು, ಕೀಳು ಎಂಬುದಿಲ್ಲ. ಎಲ್ಲ ಧರ್ಮ, ಜಾತಿಯವರಿಗೆ ಕ್ಷೌರಿಕರು ಅತ್ಯಗತ್ಯ. ಮನುಷ್ಯ ಸುಂದರವಾಗಿ ಕಾಣಬೇಕಾದರೆ ಕ್ಷೌರಿಕರ ಸಹಕಾರ ಬೇಕಾಗುತ್ತದೆ. ಸಮಾಜವು ಕ್ಷೌರಿಕರನ್ನು ನೋಡುವ ದೃಷ್ಟಿ ಇತ್ತೀಚೆಗೆ ಬದಲಾಗುತ್ತಿದೆ. ನಾವೆಲ್ಲರು ಸಂಘಟಿತರಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.