ADVERTISEMENT

ಪಠ್ಯಪುಸ್ತಕ: ಗೊಂದಲ ನಿವಾರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2022, 20:22 IST
Last Updated 25 ಮೇ 2022, 20:22 IST

ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಆಗ್ರಹಿಸಿದೆ.

ಈ ಬಗ್ಗೆ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರು ಮಹೇಶ ಜೋಶಿಗೆ ಪತ್ರ ಬರೆದಿದ್ದಾರೆ. ‘ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಕೆಲವು ಶಿಫಾರಸುಗಳ ಬಗ್ಗೆ ಕೆಲ ಸಾಹಿತಿಗಳು, ಚಿಂತಕರು, ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ್ಯ ಮತ್ತು ಶೂದ್ರರ ಪಠ್ಯಗಳೆಂದು ಪರಸ್ಪರ ಗುದ್ದಾಡುವ ಪರಿಸ್ಥಿತಿ ಬಂದಿರುವುದು ನಾಡಿನ ದುರ್ದೈವ. ಇಲ್ಲಿನ ಮಕ್ಕಳಿಗೆ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ರಾಜ್ಯ ಮತ್ತು ದೇಶದ ಏಳ್ಗೆಗೆ ದುಡಿದ ಮಹನೀಯರ ಜೀವನದ ಶ್ರೇಷ್ಠತೆ ಸಾರುವ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ಜಾತ್ಯತೀತವಾಗಿ ಪರಿಚಯ ಮಾಡುವ ಬದಲು, ಶ್ರೇಷ್ಠರೆನಿಸಿಕೊಂಡಿರುವ ಬುದ್ಧಿವಂತರು ಬೀದಿ ಕಾಳಗ ಮಾಡುತ್ತಿರುವುದು ಶೋಚನೀಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪರಿಷತ್ತು ಮಧ್ಯ ಪ್ರವೇಶಿಸಿ, ಈ ವಿವಾದಕ್ಕೆ ತೆರೆ ಎಳೆಯಬೇಕು. ಶಿಕ್ಷಣದ ಗುಣಮಟ್ಟಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಲು ಸೂಚಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.