ADVERTISEMENT

ಥಣಿಸಂದ್ರ ಅಪಘಾತ: ಬಿಬಿಎಂಪಿ–ಪೊಲೀಸ್ ಜಟಾಪಟಿ

ರಸ್ತೆ ಗುಂಡಿ: ಸ್ಕೂಟರ್ ಸವಾರ ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 19:30 IST
Last Updated 2 ಡಿಸೆಂಬರ್ 2021, 19:30 IST
ಅಪಘಾತ–‍ಪ್ರಾತಿನಿಧಿಕ ಚಿತ್ರ
ಅಪಘಾತ–‍ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಥಣಿಸಂದ್ರ ಮುಖ್ಯ ರಸ್ತೆಯಲ್ಲಿನ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಬಿಬಿಎಂಪಿ ಮತ್ತು ಸಂಚಾರ ಪೊಲೀಸರ ನಡುವೆ ಜಟಾಪಟಿಗೆ ಕಾರಣವಾಗಿದೆ. ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂದು ಪೊಲೀಸರು ವಾದಿಸುತ್ತಿದ್ದರೆ, ಪೊಲೀಸರ ಕಣ್ತಪ್ಪಿಸಲು ಯತ್ನಿಸುವ ಭರದಲ್ಲಿ ಅಪಘಾತ ನಡೆದಿದೆ ಎಂದು ಬಿಬಿಎಂಪಿ ಹೇಳುತ್ತಿದೆ.

ಆಯತಪ್ಪಿ ಬಿದ್ದ ಸ್ಕೂಟರ್ ಸವಾರ ಅಜೀಂ ಅಹ್ಮದ್‌ (21) ಮೇಲೆ ಗೂಡ್ಸ್‌ ವಾಹನವೊಂದು ಹರಿದು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಸಂಚಾರ ಠಾಣೆ ಪೊಲೀಸರು, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸವಿತಾ ಹಾಗೂ ಗೂಡ್ಸ್‌ ವಾಹನ ಚಾಲಕ ಬಂಡೇಹೊಸೂರು ಗ್ರಾಮದ ರವಿ ಅವರನ್ನು ಬಂಧಿಸಿದ್ದರು. ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ADVERTISEMENT

‘ಘಟನೆ ಸಂಬಂಧ ವಿಶೇಷ ಆಯುಕ್ತರಿಂದ (ಯೋಜನೆ) ವರದಿ ಕೇಳಿದ್ದೇನೆ. ಊಹಾಪೋಹದ ಆಧಾರದಲ್ಲಿ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸುವುದು ಸೂಕ್ತ ಅಲ್ಲ. ಆಕಸ್ಮಿಕ ಸಾವುಗಳ ಬಗ್ಗೆ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ತಪ್ಪು ಮಾಡಿದ್ದರೆ ಅಧಿಕಾರಿಗಳನ್ನು ವಹಿಸಿಕೊಳ್ಳುವುದೂ ಇಲ್ಲ. ಆದರೆ, ಮೇಲ್ನೋಟಕ್ಕೆ ನಮ್ಮ ತಪ್ಪು ಇಲ್ಲ ಎಂದು ವರದಿಯಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸುದ್ದಿಗಾರರಿಗೆ ತಿಳಿಸಿದರು.

ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯ ಎಂಜಿನಿಯರ್‌(ಯೋಜನೆ) ಎಂ. ಲೋಕೇಶ್, ‘11 ಕಿಲೋ ಮಿಟರ್‌ ಮಾರ್ಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ವರ್ಷದ ಹಿಂದೇ ಮುಗಿದಿದೆ. ನಿರ್ದಿಷ್ಟ ಸ್ಥಳದಲ್ಲಿ ಜಲ ಮಂಡಳಿಯಿಂದ ಅಗೆದು ಮತ್ತೆ ಮುಚ್ಚಲಾಗಿದೆ’ ಎಂದರು.

‘ಸ್ಥಳೀಯರು ಹೇಳುವ ಮತ್ತು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ ಗುಂಡಿ ಇರುವ ಜಾಗದಲ್ಲಿ ಅಪಘಾತ ನಡೆದೇ ಇಲ್ಲ. ಸ್ವಲ್ಪ ಮುಂದೆ ಅಪಘಾತ ನಡೆದಿದೆ. ಗೂಡ್ಸ್ ವಾಹನದ ಮುಂದೆ ಅಪಘಾತಕ್ಕೀಡಾದ ಸ್ಕೂಟರ್ ಹೋಗುತ್ತಿತ್ತು ಎಂಬುದು ಕೂಡ ದೃಶ್ಯದಲ್ಲಿ ಇಲ್ಲ. ಅಪಘಾತಕ್ಕೆ ಬೇರೆಯೇ ಕಾರಣ ಇದ್ದಂತಿದೆ’ ಎಂದರು.

‘ಸಂಚಾರ ಪೊಲೀಸರು ದಾಖಲೆಗಳ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿ ಸ್ಕೂಟರ್ ಸವಾರ ಹಿಂದಕ್ಕೆ ಬಂದಾಗ ಅಪಘಾತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಯೇ ತಿಳಿಸಿದ್ದಾರೆ. ಅಪಘಾತಕ್ಕೆ ಬಿಬಿಎಂಪಿ ಕಾರಣ ಅಲ್ಲ, ಸಂಚಾರ ಪೊಲೀಸರೇ ಕಾರಣ’ ಎಂದು ಸ್ಥಳ ಪರಿಶೀಲನೆ ತಂಡದಲ್ಲಿದ್ದ ಪಾಲಿಕೆ ಅಧಿಕಾರಿಯೊಬ್ಬರು ಹೇಳಿದರು.

‘ಅಪಘಾತಕ್ಕೆ ಗುಂಡಿಯೇ ಕಾರಣ’

‘ಥಣಿಸಂದ್ರದಿಂದ ಹೆಗಡೆ ನಗರಕ್ಕೆ ಹೋಗುವ ರಸ್ತೆಯ ‘ಪ್ರಕಾಶ್ ಹಾರ್ಡ್‌ವೇರ್’ ಮಳಿಗೆ ಮುಂಭಾಗದಲ್ಲಿ ಗುಂಡಿಗಳು ಬಿದ್ದಿವೆ. ಇದೇ ರಸ್ತೆಯಲ್ಲಿ ಅಜೀಂ ಅಹ್ಮದ್ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಗುಂಡಿಯಿಂದಾಗಿ ವಾಹನ ಉರುಳಿಬಿದ್ದು, ಅಜೀಂ ರಸ್ತೆಗೆ ಬಿದ್ದಿದ್ದರು. ಅದೇ ಸಮಯಕ್ಕೆ ಹಿಂದಿನಿಂದ ಬಂದ ಗೂಡ್ಸ್ ವಾಹನದ ಚಕ್ರ, ಅಜೀಂ ಅವರ ತೊಡೆ ಹಾಗೂ ಬಲಗೈ ಮೇಲೆ ಹರಿದಿತ್ತು’ ಎಂದು ಸಂಚಾರ ಪೊಲೀಸರು ಹೇಳಿದರು.

‘ಅಪಘಾತವಾದ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದೆ. ಗುಂಡಿಯೇ ಅವಘಡಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆ ಸಂಬಂಧ ಪುರಾವೆಗಳನ್ನೂ ಸಂಗ್ರಹಿಸಲಾಗಿದೆ. ಗೂಡ್ಸ್ ವಾಹನ ಚಾಲಕ ರವಿಯನ್ನೂ ಬಂಧಿಸಲಾಗಿದ್ದು, ಆತನ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.