ADVERTISEMENT

ಸುಳ್ಳು ದಾಖಲೆ: ಥಣಿಸಂದ್ರ ಸಾಮರ್ ಸ್ಕೂಲ್ ಆಡಳಿತಾಧಿಕಾರಿ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 15:55 IST
Last Updated 29 ಜನವರಿ 2026, 15:55 IST
   

ಬೆಂಗಳೂರು: ಶಾಲೆಯ ಹೆಸರು ಬದಲಾವಣೆ ಸಂದರ್ಭದಲ್ಲಿ ಬೇರೆ ಹೆಸರುಗಳಲ್ಲಿ ದಾಖಲೆ ಸಲ್ಲಿಸಿ, ನೋಂದಣಿ ಮತ್ತು ಮಾನ್ಯತೆ ನವೀಕರಣ ಮಾಡಿರುವ ಥಣಿಸಂದ್ರದ ಸಾಮರ್ ಇಂಟರ್‌ ನ್ಯಾಷನಲ್‌ ಇಸ್ಲಾಮಿಕ್ ಸ್ಕೂಲ್ ಮುಖ್ಯ ಆಡಳಿತಾಧಿಕಾರಿ ಖಾಲಿದ್ ಮುಷರಫ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶಿಕ್ಷಣ ಇಲಾಖೆಯ ಅಧಿಕಾರಿ ಸಿ.ಎನ್.ಗೋವಿಂದಪ್ಪ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಶಾಲೆಯ ಆಡಳಿತ ಮಂಡಳಿಯು ಸುಳ್ಳು ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮತ್ತು ಮಾನ್ಯತೆ ನವೀಕರಣವನ್ನು ಪಡೆದಿದೆ. ಶಾಲಾ ಶುಲ್ಕವನ್ನು ಸ್ವೀಕರಿಸಿ ವಿವಿಧ ಹೆಸರುಗಳಲ್ಲಿ ರಸೀದಿ ನೀಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಅಲ್ಲದೇ ಅನುಮತಿ ಪಡೆದಿರುವ ಹೆಸರಿನಲ್ಲಿ ಶುಲ್ಕವನ್ನು ಪಡೆದು, ರಸೀದಿ ನೀಡದೆ ಪೋಷಕರಿಗೆ ಮೋಸ ಮಾಡಲಾಗಿದೆ’ ಎಂದು ದೂರುದಾರರು ಆರೋಪಿಸಿದ್ದಾರೆ.

ADVERTISEMENT

‘ಸಾಮರ್ ಇಂಟರ್‌ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರೂ ‘ಸಾಮರ್ ಇಂಟರ್ ನ್ಯಾಷನಲ್‌ ಸ್ಕೂಲ್’ ಎಂದು ನಾಮಫಲಕ ಅಳವಡಿಸಿ ಪೋಷಕರನ್ನು ಗೊಂದಲಕ್ಕೆ ದೂಡಿರುವ ಕಾರಣ ಮುಖ್ಯ ಆಡಳಿತಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮಾನ್ಯತೆ ಹಿಂಪಡೆದು ನೋಂದಣಿ ರದ್ದುಪಡಿಸಿರುವುದರಿಂದ ಶಾಲೆಯನ್ನು ಮುಚ್ಚಿಸಿ ವಿದ್ಯಾರ್ಥಿಗಳಿಗೆ ಇತರೆ ಶಾಲೆಗಳಿಗೆ ದಾಖಲಿಸಬೇಕಾದ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಹಾಗಾಗಿ ಸೂಕ್ತ ಬಂದೋಬಸ್ತ್‌ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.