ADVERTISEMENT

ಸೌಹಾರ್ದ ಶಿಕ್ಷಣ ಇಂದಿನ ಅಗತ್ಯ: ಗೆಹಲೋತ್

ಪಿಇಎಸ್‌ ವಿವಿ ಹೊರತಂದ ‘ಕಥಾ ಲೋಕ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 18:49 IST
Last Updated 17 ಸೆಪ್ಟೆಂಬರ್ 2022, 18:49 IST
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕಥಾ ಲೋಕ’ ಪುಸ್ತಕವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶುಕ್ರವಾರ ಬಿಡುಗಡೆ ಮಾಡಿದರು. ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಇದ್ದಾರೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕಥಾ ಲೋಕ’ ಪುಸ್ತಕವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶುಕ್ರವಾರ ಬಿಡುಗಡೆ ಮಾಡಿದರು. ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಇದ್ದಾರೆ.   

ಬೆಂಗಳೂರು:ಸಾಮಾಜಿಕ ಸಮಾನತೆ–ಸೌಹಾರ್ದ ಕಾಪಾಡುವ, ನೈತಿಕ ಪ್ರಜ್ಞೆ ಮೂಡಿಸುವ ಶಿಕ್ಷಣದ ಅವಶ್ಯ ಇದೆ ಎಂದುರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಪಿಇಎಸ್ ವಿಶ್ವವಿದ್ಯಾಲಯ ಶಾಲಾ ವಿದ್ಯಾರ್ಥಿಗಳಿಗೆ ರೂಪಿಸಿದ ಕನ್ನಡ ನೈತಿಕ ಕಥೆಗಳ ಸಂಕಲನ ‘ಕಥಾ ಲೋಕ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಆಧುನಿಕ ಜ್ಞಾನವನ್ನು ಮೌಲ್ಯ ಗಳೊಂದಿಗೆ ಬೆಸೆಯುವ, ಧರ್ಮ, ಸಂಸ್ಕೃತಿ, ರಾಷ್ಟ್ರದ ಏಕತೆ, ಸಮಗ್ರತೆ ಕಾಪಾಡುವ ಮನೋಭಾವದ ಶಿಕ್ಷಣ ವನ್ನು ಶಾಲೆಗಳಲ್ಲಿ ಕಲಿಸಬೇಕಿದೆ. ಮಕ್ಕಳ ಶೈಕ್ಷಣಿಕ ಬುನಾದಿ ಗಟ್ಟಿಯಾಗಿದ್ದರೆ ಉನ್ನತ ಜ್ಞಾನ ಸಂಪಾದಿಸಿ, ಭವಿಷ್ಯದಲ್ಲಿ ಅತ್ಯುನ್ನತ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.

ADVERTISEMENT

ಮನೆಯ ತಳ‍ಪಾಯ ಭದ್ರವಾಗಿದ್ದರೆ ಮನೆ ದೀರ್ಘಕಾಲ ಬಾಳಿಕೆಗೆ ಬರುತ್ತದೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಭವಿಷ್ಯ ಉಜ್ವಲವಾಗಲಿದೆ. ನೈತಿಕ ಕಥೆಗಳು ಮಕ್ಕಳ ಜೀವನಕ್ಕೆ ಅತ್ಯವಶ್ಯ. ಮಕ್ಕಳ ಅಡಿಪಾಯ ಬಲಪಡಿಸುವ ಜತೆಗೆ, ಸಾಂಸ್ಕೃತಿಕ, ಭಾವನಾತ್ಮಕ ಬೆಳವಣಿಗೆಗೂ ಸಹಕಾರಿ.ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳ ಭವಿಷ್ಯವನ್ನು ಉಜ್ವಲ ಹಾಗೂ ಸುರಕ್ಷಿತವಾಗಿಸಲಿದೆ ಎಂದರು.

ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ, ‘ಕಥಾ ಲೋಕ’ಪುಸ್ತಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿಸಂಗ್ರಹಿಸಲಾಗಿದೆ.ಈ ಪುಸ್ತಕದ ಅಧ್ಯಯನ ಮಕ್ಕಳಲ್ಲಿ ನೈತಿಕತೆ, ದೇಶಭಕ್ತಿ ಬೆಳೆಸುತ್ತದೆ. ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ,ಭಾರತೀಯ ಕಥಾ ಪರಂಪರೆಗೆ ಜನಪದೀಯ ಕೊಡುಗೆ ಅಪಾರ. ಇಂದಿನ ತಾಂತ್ರಿಕ ಯುಗದಲ್ಲಿ ಕತೆ ಹೇಳುವ ಕಲೆ ಮಾಯವಾಗಿದೆ. ಇಂತಹ ಸಮಯದಲ್ಲಿ ಕಥಾಲೋಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ ಎಂದರು.

ಶಾಸಕ ಬಿ.ಎಸ್.ಯಡಿಯೂರಪ್ಪ, ಪಿಇಎಸ್‌ ವಿವಿ ಕುಲಪತಿ ಜೆ. ಸೂರ್ಯ ಪ್ರಸಾದ್,ಕುಲಸಚಿವ ಡಾ.ಕೆ.ಎಸ್. ಶ್ರೀಧರ, ಪ್ರೊ.ವಿ.ಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.