ADVERTISEMENT

ತ್ಯಾಮಗೊಂಡ್ಲು: ಆಸ್ಪತ್ರೆ ಸಿಬ್ಬಂದಿಗೆ ವಸತಿಗೃಹ ನಿರ್ಮಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:05 IST
Last Updated 6 ನವೆಂಬರ್ 2020, 19:05 IST
ಲೋಕೋಪಯೋಗಿ ಇಲಾಖೆಯ ಕ‌ಟ್ಟಡ
ಲೋಕೋಪಯೋಗಿ ಇಲಾಖೆಯ ಕ‌ಟ್ಟಡ   

ದಾಬಸ್ ಪೇಟೆ: ಇಲ್ಲಿನ ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಶುಶ್ರೂಷಕಿಯರಿಗೆ ತಂಗಲು ವಸತಿಗೃಹಗಳೇ ಇಲ್ಲ.

ಕೆಲ ವರ್ಷ ಆಸ್ಪತ್ರೆ ಸನಿಹದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡಗಳನ್ನು ವಸತಿಗೃಹ
ಗಳಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಅದರ ನಿರ್ವಹಣೆ ಇಲ್ಲದ್ದರಿಂದ ಕಟ್ಟಡ ಹಾಳಾಗಿದ್ದು, ಮುಳ್ಳು ಬೇಲಿ ಬೆಳೆದಿದೆ.

ವಸತಿಗೃಹಗಳಿಲ್ಲದೇ ಇರುವುದ ರಿಂದ ಶುಶ್ರೂಷಕಿಯರು, ವೈದ್ಯರು ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಬಾಡಿಗೆ ಹೆಚ್ಚು ಹಾಗೂ ಸೂಕ್ತ ಮನೆಗಳು ಸಿಗದೆ ವೈದ್ಯರು, ಸಿಬ್ಬಂದಿ ತೊಂದರೆ ಪಡುತ್ತಿದ್ದಾರೆ.

ADVERTISEMENT

ಹೋಬಳಿ ಕೇಂದ್ರದಲ್ಲಿರುವ ಈ ಆಸ್ಪತ್ರೆಯು ದಿನವಡೀ ಕಾರ್ಯ
ನಿರ್ವಹಿಸುತ್ತಿದೆ. ಅಂದಾಜು 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣಕ್ಕೆ ಹೊಂದಿಕೊಂಡಂತೆ ಕೈಗಾರಿಕಾ ಪ್ರದೇಶವಿದ್ದು 200ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳಿವೆ.

ಈ ಆಸ್ಪತ್ರೆಯಲ್ಲಿ ದಿನ 200 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಪ್ರತಿ ತಿಂಗಳು 15ರಿಂದ 20 ಮಕ್ಕಳು ಜನಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳು ಹಾದು ಹೋಗಿರುವುದರಿಂದ
ಅಪಘಾತಗಳಿಂದಲೂ ಹೆಚ್ಚು ಜನ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.

ಆಸ್ಪತ್ರೆಯಲ್ಲಿ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಒಂದು ಕಾಯಂ ಮಕ್ಕಳ ತಜ್ಞರ ಹುದ್ದೆ ಖಾಲಿ ಇದೆ. ಆರು ಜನ ಕಾಯಂ ಮತ್ತು ಮೂವರು ಎನ್ಆರ್‌ಎಚ್ಎಂ ಅಡಿ ಶುಶ್ರೂಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‌ವಸತಿ ಗೃಹ ನಿರ್ಮಾಣ ಸಂಬಂಧ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಅಧಿಕಾರಿಗಳಿಗೆ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಮೂರು ಬಾರಿ ಪತ್ರ ಬರೆದಿದ್ದಾರೆ.

ಸ್ವಂತ ಜಾಗ ಇಲ್ಲ: ‘ವಸತಿಗೃಹ ನಿರ್ಮಾಣಕ್ಕೆ ಆರೋಗ್ಯ ಕೇಂದ್ರದ ಸ್ವಂತ ಜಾಗ ಇಲ್ಲ. ಆರೋಗ್ಯ ಕೇಂದ್ರದ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಯ ಕಟ್ಟಡವಿದ್ದು, ಈ ಮೊದಲು ಇಲ್ಲಿಯೇ ವೈದ್ಯರು ಹಾಗೂ ಶುಶ್ರೂಷಕಿಯರು ತಂಗುತ್ತಿದ್ದರು. ಅವು ನಿರ್ವಹಣೆ ಇಲ್ಲದೆ ಹಾಳಾಗಿದೆ. ವಸತಿಗೃಹಗಳನ್ನು ನಿರ್ಮಿಸಿ ಕೊಟ್ಟರೆ ಅನುಕೂಲವಾಗುತ್ತದೆ‘ ಎಂದು
ಡಾ. ಲಕ್ಷ್ಮೀಕಾಂತ್ ತಿಳಿಸಿದರು.

ಪ್ರಸ್ತಾವನೆ: ‘ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಪ್ರಸ್ತಾವನೆ ಸಲ್ಲಿಸಿ ವಸತಿಗೃಹ ನಿರ್ಮಾಣ ಮಾಡಿಕೊಡಲಾಗುವುದು’ ಎಂದು ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಅಧಿಕಾರಿ ಮಂಜುಳಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.