ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಪ್ರೇಯಸಿಯ ಮೂರು ವರ್ಷದ ಮಗುವನ್ನು ಕೊಂದಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿರಾಟನಗರ ನಿವಾಸಿ ಮೈಕಲ್ ರಾಜ್(38) ಬಂಧಿತ ಆರೋಪಿ.
‘ಜುಲೈ 6ರಂದು ಪ್ರೇಯಸಿಯ ಮೂರು ವರ್ಷದ ಮಗುವನ್ನು ಮೈಕಲ್ ರಾಜ್ ಕೊಲೆ ಮಾಡಿ ಪರಾರಿ ಆಗಿದ್ದರು. ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಮೃತ ಮಗುವಿನ ತಾಯಿ ರಮ್ಯಾ ಅವರು ಆರು ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿಗೆ ಮಗು ಇತ್ತು. ಈ ಮಧ್ಯೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದು, ಆ ಮಹಿಳೆ ತವರು ಮನೆ ಸೇರಿದ್ದರು. ಈ ಮನೆ ಮುಂಭಾಗದಲ್ಲಿ ಆರೋಪಿ ಮೈಕಲ್ ರಾಜ್ ಗ್ಯಾರೇಜ್ ನಡೆಸುತ್ತಿದ್ದರು. ಇಬ್ಬರೂ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದರು’ ಎಂದು ಪೊಲೀಸರು ಹೇಳಿದರು.
‘ಕೆಲವು ತಿಂಗಳಿಂದ ಆರೋಪಿ, ಮಹಿಳೆ ಹಾಗೂ ಆಕೆಯ ಮಗು ಬೊಮ್ಮನಹಳ್ಳಿಯ ವಿರಾಟನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಮಗು ಹೆಚ್ಚು ಹಠ ಮಾಡುವುದು, ಜೋರಾಗಿ ಅಳುತ್ತಿತ್ತು. ಆರೋಪಿಗೆ ತನ್ನ ಪ್ರೇಯಸಿ ಜತೆ ಖುಷಿಯಿಂದ ಇರಲು ಸಾಧ್ಯವಾಗಿರಲಿಲ್ಲ. ಜುಲೈ 6ರಂದು ಮಹಿಳೆ ಹೊರಗೆ ತೆರಳಿದ್ದ ಸಂದರ್ಭದಲ್ಲಿ ಕೋಪಗೊಂಡಿದ್ದ ಆರೋಪಿ, ಮಗುವಿನ ಕಪಾಳಕ್ಕೆ ಹೊಡೆದು ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.