ADVERTISEMENT

ಬಂಧಿತ ಆರೋಪಿ ಬಾಂಗ್ಲಾ ಪ್ರಜೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 19:54 IST
Last Updated 29 ಜನವರಿ 2023, 19:54 IST

ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ನಾಜ್ (22) ಅವರ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ, ಅಕೆಯ ಪತಿ ನಾಸಿರ್ ಹುಸೇನ್ ಬಾಂಗ್ಲಾ ದೇಶದ ಪ್ರಜೆ ಎಂಬುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ತಾವರೆಕೆರೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೊಲೆ ನಡೆದಿತ್ತು. ಕೃತ್ಯದ ಬಳಿಕ ಪರಾರಿಯಾಗಿದ್ದ ನಾಸಿರ್ ಹುಸೇನ್‌ನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ‘ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿದ್ದಾಗಿ ತಿಳಿಸಿದ್ದಾನೆ‘ ಎಂದು ಮೂಲಗಳು ತಿಳಿಸಿವೆ.

‘ಬಾಂಗ್ಲಾದೇಶದ ಢಾಕಾದಲ್ಲಿ ಹಾರ್ಡ್‌ವೇರ್ ಎಂಜಿನಿಯರಿಂಗ್‌ ಪದವಿ ಪಡೆಯಲು ಸೇರಿದ್ದ. ಅರ್ಧಕ್ಕೆ ಮೊಟಕುಗೊಳಿಸಿ ಖಾಸಗಿಯಾಗಿ ಹಾರ್ಡ್‌ವೇರ್‌ ತರಬೇತಿ ಪಡೆದಿದ್ದ. ಈತ 9 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ. ಪಶ್ಚಿಮ ಬಂಗಾಳಕ್ಕೆ ಬಂದು ಅಲ್ಲಿ ನಕಲಿ ಆಧಾರ್‌ ಕಾರ್ಡ್‌ ಹಾಗೂ ಪಾನ್‌ಕಾರ್ಡ್‌ ಮಾಡಿಸಿಕೊಂಡಿದ್ದ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ದೆಹಲಿ, ಮುಂಬೈನಲ್ಲಿ ಮೊಬೈಲ್‌ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಬಳಿಕ 2019ರಲ್ಲಿ ಬೆಂಗಳೂರಿಗೆ ಬಂದು ಲ್ಯಾಪ್‌ಟಾಪ್ ರಿಪೇರಿ ಕೆಲಸ ಮಾಡುತ್ತಿದ್ದ. ಸುಭಾಷ್‌ ನಗರದಲ್ಲಿ ಶಾಪ್ ತೆರೆದುಕೊಂಡಿದ್ದ. ಈತನಿಗೆ ನಕಲಿ ದಾಖಲೆ ಮಾಡಿಕೊಟ್ಟವರಿಗಾಗಿ ಹುಡುಕಾಟ ನಡೆದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.