ಬೆಂಗಳೂರು: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವೀರಶೈವ ಕವಿಗಳು ಮಹತ್ವವಾದ ಕೃತಿಗಳನ್ನು ನೀಡಿದ್ದಾರೆ ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಸುಮಾ ಪ್ರಕಾಶನ, ಜ್ಞಾನ ಸಂಬುದ್ಧ ಪ್ರಕಾಶನ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ವೀರಶೈವ ಶತಕ ಸಾಹಿತ್ಯ’ ಕೃತಿ ಬಿಡುಗಡೆ, ಎಸ್.ಆರ್. ಸದಾಶಿವಯ್ಯ ಅವರ 73ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶತಕ ಸಾಹಿತ್ಯವು ಕನ್ನಡದ ಪ್ರಕಾರಗಳಲ್ಲಿ ಒಂದಾಗಿದೆ. ಇದು ಸಂಸ್ಕೃತ ಶತಕಗಳಿಗಿಂತ ಬೇರೆಯೇ ಸ್ವರೂಪವನ್ನು ಹೊಂದಿದೆ. ಸಮನ್ವಯ ಜೀವನದ ವಿವೇಕವನ್ನು ಕನ್ನಡದ ಶತಕಗಳು ಪ್ರತಿಪಾದಿಸಿವೆ’ ಎಂದು ವಿವರಿಸಿದರು.
ಭಕ್ತಿ, ಜ್ಞಾನ, ವೈರಾಗ್ಯ, ಶರಣ ತತ್ವ, ಲೋಕನೀತಿ ಸ್ಧಾನ, ಲೋಕಾನುಭವ ಇವುಗಳು ಶತಕಗಳ ವಿಷಯವಾಗಿದ್ದು ವೀರಶೈವ ಶತಕ ಸಾಹಿತ್ಯವು ಕನ್ನಡದ ಧಾರ್ಮಿಕ ತಾತ್ವಿಕ ಸಾಹಿತ್ಯವಾಗಿದ್ದು ಬಸವಾದಿ ಶರಣರು ಪ್ರತಿಪಾದಿಸಿದ ಸಕಲ ಜೀವಾತ್ಮರಿಗೆ ಲೇಸು ಬಯಸುವ ಉದಾತ್ತ ಮೌಲ್ಯಗಳು, ಅನುಭಾವಿಕ ಆಯಾಮಗಳು ಇವುಗಳ ಮುಖ್ಯ ಉದ್ದೇಶ ಎಂದು ಹೇಳಿದರು.
ವಿ.ಸೋಮಣ್ಣ ಪ್ರತಿಷ್ಠಾನ ಅಧ್ಯಕ್ಷೆ ಶೈಲಜ ಸೋಮಣ್ಣ ಮಾತನಾಡಿ, ‘ಕವಿ ಹರಿಹರರಿಂದ ಹಿಡಿದು ಇಲ್ಲಿಯವರೆಗೆ ಕನ್ನಡದ ಕವಿ ಪರಂಪರೆ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡಿದೆ. ವೀರಶೈವ ಧರ್ಮವು ಎಲ್ಲರನ್ನು ಅಪ್ಪಿಕೊಂಡು ಸನ್ಮಾರ್ಗದಲ್ಲಿ ನಡೆಯುವ ತತ್ವವನ್ನು ಹೇಳಿದೆ’ ಎಂದರು.
ಸಂಸ್ಕೃತಿ ಚಿಂತಕ ರಾಜಶೇಖರ ಮಠಪತಿ, ಕನ್ನಡ ಚಳವಳಿ ಮುಖಂಡ ಪಾಲನೇತ್ರ, ಕೃತಿಕಾರ್ತಿ ಎಸ್. ದೇವಿಕಾ, ಸಾಹಿತಿಗಳಾದ ಬಿ. ನಂಜುಂಡಸ್ವಾಮಿ, ಪಿ.ದಿವಾಕರ ನಾರಾಯಣ, ಆಧ್ಯಾತ್ಮಿಕ ಚಿಂತಕ ಜಂಬುನಾಥ ಮಳಿಮಠ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಿ.ಎಂ. ಗಂಗಾಧರಯ್ಯ ಪ್ರಕಾಶಕರಾದ ಗುಂಡಿಗೆರೆ ವಿಶ್ವನಾಥ್, ಭದ್ರಾವತಿ ರಾಮಾಚಾರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.