ಬೆಂಗಳೂರು: ಡಿಜಿಟಲ್ ಯುಗದಲ್ಲಿ ನೋಡುವ ಮತ್ತು ಕೇಳುವ ಸಂಸ್ಕೃತಿ ಅತಿವೇಗವಾಗಿ ಬೆಳೆಯುತ್ತಿದ್ದು, ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಾಹಿತಿ ರಹಮತ್ ತರೀಕೆರೆ ತಿಳಿಸಿದರು.
ಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು, ಲೇಖಕರ ಸಂಘಕ್ಕೆ ಚಾಲನೆ, ಅಂಬೇಡ್ಕರ್ ಜಯಂತಿ, ವಿಶ್ವ ಪುಸ್ತಕ ದಿನ ಕಾರ್ಯಕ್ರಮದಲ್ಲಿ ‘ಸಮಕಾಲೀನ ಸಂದರ್ಭದಲ್ಲಿ ಪುಸ್ತಕಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ತಾಳ್ಮೆಯೇ ಇಲ್ಲದ ಯುವ ಸಮುದಾಯ ಇದೆ. ದೊಡ್ಡ ಕೃತಿಗಳನ್ನು ಅವರು ಓದುತ್ತಾರಾ ಎಂಬ ಬಗ್ಗೆ ಸಂಶಯವಿದೆ. ಕನಿಷ್ಠ ಅವರು ಡಿಜಿಟಲ್‌ನಲ್ಲಿಯಾದರೂ ಓದುವಂತಾಗಬೇಕು. ಪುಸ್ತಕ ಸಂಸ್ಕೃತಿ ನಶಿಸಿದರೂ ಓದುವ ಸಂಸ್ಕೃತಿ ನಶಿಸಬಾರದು ಎಂದು ಆಶಯ ವ್ಯಕ್ತಪಡಿಸಿದರು.
ಪುಸ್ತಕಗಳು ಓದುಗರ ಮೇಲೆ, ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ವ್ಯಾಪಾರದ ಉದ್ದೇಶವೊಂದನ್ನೇ ಇಟ್ಟುಕೊಂಡು ಪುಸ್ತಕ ಉತ್ಪಾದನೆ ಮಾಡುವ ಒಂದು ವರ್ಗ ಇದೆ. ರಾಜಕೀಯ ಅಜೆಂಡಗಳಿಗಾಗಿ ಗತಕಾಲವನ್ನು ತಿರುಚಿ ಬರೆದಿರುವುದನ್ನು ಪ್ರಕಟಿಸುವ ವರ್ಗವೂ ದೊಡ್ಡಮಟ್ಟದಲ್ಲಿದೆ. ಆದರೆ, ಇವುಗಳ ಬದಲು ನಮಗೆ ಬೇಕಿರುವುದು ಮನುಕುಲದ ಒಳಿತಿಗಾಗಿ ಕೃತಿ ಪ್ರಕಟಿಸಿ ಸಂವೇದನಾಶೀಲ ನಾಗರಿಕರನ್ನು ಸೃಷ್ಟಿಸುವ, ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಮೂರನೇ ವರ್ಗ ಎಂದು ವಿಶ್ಲೇಷಿಸಿದರು.
ಪ್ರಕಾಶಕರು, ಮಾರಾಟಗಾರರು, ಲೇಖಕರ ಜೊತೆಗೆ ಪರಿಚಾರಕರನ್ನು, ಹಿನ್ನೆಲೆಯಲ್ಲಿದ್ದುಕೊಂಡು ಪುಸ್ತಕಪ್ರೀತಿಯಿಂದ ಕೆಲಸ ಮಾಡುವವರನ್ನು ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಅವರ ವ್ಯಕ್ತಿತ್ವ, ಚಳವಳಿ, ಚಿಂತನೆಯ ಹಿಂದೆ ಪುಸ್ತಕಗಳಿವೆ. ಕಹಿ ಅನುಭವ, ಅಧ್ಯಯನ ಮತ್ತು ಚಿಂತನೆಗಳೇ ಶ್ರೇಷ್ಠ ಪುಸ್ತಕಗಳಾಗಿ ಬಂದಿವೆ. ಸಂವಿಧಾನ ರಚನೆಯ ಹಿಂದೆಯ ಓದು ಇದೆ. ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಖಾಸಗಿ ಪುಸ್ತಕಾಲಯ ಅಂಬೇಡ್ಕರ್ ಮನೆಯಲ್ಲಿತ್ತು ಎಂದು ಮಾಹಿತಿ ನೀಡಿದರು.
ಸಂಘದ ಲಾಂಛನ ಬಿಡುಗಡೆ ಮಾಡಲಾಯಿತು. ಪ್ರಕಾಶಕಿ ಆರ್. ಪೂರ್ಣಿಮಾ, ಹೋರಾಟಗಾರ ಮಾವಳ್ಳಿ ಶಂಕರ್, ಆಕೃತಿ ಪುಸ್ತಕದ ಗುರುಪ್ರಸಾದ್ ಡಿ.ಎನ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.