ADVERTISEMENT

ನಗರದಲ್ಲಿ ಮೊದಲ ‘ಇಂಗಾಲ ತಟಸ್ಥ’ ಆಸ್ಪತ್ರೆ

ಅಂಬಿಕಾ ಮೆಡಿಕಲ್‌ ಫೌಂಡೇಷನ್‌ ಮತ್ತು ಸಂಶೋಧನಾ ಕೇಂದ್ರದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 19:53 IST
Last Updated 29 ಜನವರಿ 2023, 19:53 IST
ಕೇಂದ್ರ ಶಿಕ್ಷಣ ಮತ್ತು ವಿದೇಶಾಂಗ ಖಾತೆಯ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್‌ ಸಿಂಗ್ ಅವರನ್ನು ಅಂಬಿಕಾ ಕನ್‌ಸ್ಟ್ರಕ್ಷನ್‌ ಸಿಇಒ ಪ್ರವೀಶ್ ಕುಜಿಪಿಲ್ಲಿ ಸನ್ಮಾನಿಸಿದರು. ಡಾ.ಜೆ.ಎಸ್. ರಾಜಕುಮಾರ್ ಮತ್ತು ವಕೀಲ ರಾಮಕುಮಾರ್ ಇದ್ದಾರೆ– ಪ್ರಜಾವಾಣಿ ಚಿತ್ರ.
ಕೇಂದ್ರ ಶಿಕ್ಷಣ ಮತ್ತು ವಿದೇಶಾಂಗ ಖಾತೆಯ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್‌ ಸಿಂಗ್ ಅವರನ್ನು ಅಂಬಿಕಾ ಕನ್‌ಸ್ಟ್ರಕ್ಷನ್‌ ಸಿಇಒ ಪ್ರವೀಶ್ ಕುಜಿಪಿಲ್ಲಿ ಸನ್ಮಾನಿಸಿದರು. ಡಾ.ಜೆ.ಎಸ್. ರಾಜಕುಮಾರ್ ಮತ್ತು ವಕೀಲ ರಾಮಕುಮಾರ್ ಇದ್ದಾರೆ– ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ಅಂಬಿಕಾ ಮೆಡಿಕಲ್‌ ಫೌಂಡೇಷನ್‌ ಮತ್ತು ಸಂಶೋಧನಾ ಕೇಂದ್ರ ಭಾರತದ ಮೊದಲ ‘ಇಂಗಾಲ ತಟಸ್ಥ’ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬೆಂಗಳೂರಿನ ಕಲ್ಯಾಣನಗರದಲ್ಲಿ ಆರಂಭಿಸುತ್ತಿದೆ’ ಎಂದು ಕೇಂದ್ರ ಶಿಕ್ಷಣ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್‌ ಸಿಂಗ್ ಹೇಳಿದರು.

ಚೆನ್ನೈನ ಲೈಫ್‌ಲೈನ್‌ ಆಸ್ಪತ್ರೆ ಸಹಯೋಗದಲ್ಲಿ ₹1,200 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 500 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ ಸಾಂಪ್ರದಾಯಿಕ ಆಸ್ಪತ್ರೆಗಳಿಗಿಂತ ಇಲ್ಲಿ ಭಿನ್ನ ರೀತಿಯ ಸೇವೆ ದೊರಕಲಿದೆ. ಅಲೋಪಥಿ, ಭಾರತೀಯ ಚಿಕಿತ್ಸಾ ವಿಜ್ಞಾನ, ಆಧ್ಯಾತ್ಮಿಕ ವೈದ್ಯಕೀಯ ಶಾಸ್ತ್ರ, ಮುಂದುವರಿದ ವೈದ್ಯಕೀಯ ವಿಜ್ಞಾನ ಸೇರಿದಂತೆ ಸಮಗ್ರ ವೈದ್ಯಕೀಯ ಸಾಧ್ಯತೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಕಾಯಿಲೆಗೂ ಒಂದೇ ವೇದಿಕೆಯಲ್ಲಿ ಸಮಗ್ರ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಭಾರತ ವಿಶ್ವದ ಔಷಧಾಲಯವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತ ಬಂದಿದೆ. ಅಮೆರಿಕ, ಇಂಗ್ಲೆಂಡ್‌, ಆಫ್ರಿಕಾ ಒಳಗೊಂಡಂತೆ ಹಲವು ರಾಷ್ಟ್ರಗಳಿಗೆ ಭಾರತದಿಂದಲೇ ಜನರಿಕ್‌ ಔಷಧ ತಲುಪುತ್ತದೆ’ ಎಂದು ವಿವರಿಸಿದರು.

ಅಂಬಿಕಾ ಕನ್‌ಸ್ಟ್ರಕ್ಷನ್‌ ಸಿಇಒ ಪ್ರವೀಶ್ ಕುಜಿಪಿಲ್ಲಿ, ‘ಯೋಜನೆಗಾಗಿ ಕಲ್ಯಾಣ ನಗರದಲ್ಲಿ ಭೂಮಿ ಪಡೆಯಲಾಗಿದೆ. ಎರಡನೇ ಹಂತದ ಆಸ್ಪತ್ರೆಗೆ ಕೆಂಗೇರಿಯಲ್ಲಿ 50 ಎಕರೆ ಭೂಮಿ ಖರೀದಿಸಲಾಗಿದೆ’ ಎಂದರು.

‘ಆಸ್ಪತ್ರೆಯು ಜನರಿಗೆ ಸುಲಭ ಪ್ರವೇಶ ಮತ್ತು ಸಮಗ್ರ ಆರೈಕೆ ಒದಗಿಸಲಿದೆ’ ಎಂದು ಚೆನ್ನೈನ ಲೈಫ್‌ಲೈನ್‌ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಎಸ್. ರಾಜ್‌ಕುಮಾರ್‌ ಮಾಹಿತಿ ನೀಡಿದರು. ವಕೀಲ ರಾಮಸ್ವಾಮಿ, ಸಂಸ್ಥೆಯ ಪ್ರಮುಖರಾದ ಶ್ರೀನಿವಾಸ ರೆಡ್ಡಿ, ಅಮಿತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.