ಬೆಂಗಳೂರು: ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಮಾತ್ರ ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಕನ್ನಡ ಶಿಕ್ಷಕಿಯೊಬ್ಬರ ಜಾತಿ ಪ್ರಮಾಣ ಪತ್ರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿತು.
ಮೈಸೂರಿನ ಬಿ.ಆರ್.ಗೋಪಮ್ಮ ಎಂಬವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಲ್ಲಿಸಿ 1979ರಲ್ಲಿ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇರಿದ್ದರು. ಮೂಲತಃ ಒಕ್ಕಲಿಗ ಸಮುದಾಯಕ್ಕೆ ಸೇರಿ ಗೋಪಮ್ಮ, ಪರಿಶಿಷ್ಟ ಜಾತಿಯ ಗೋವಿಂದಯ್ಯ ಎಂಬುವರನ್ನು ಮದುವೆಯಾಗಿದ್ದರು.
ಗೋಪಮ್ಮ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಶಿಕ್ಷಕಿ ಹುದ್ದೆ ಪಡೆದಿದ್ದಾರೆ ಎಂದು ಆರ್.ಎಸ್. ಮಹದೇವ್ 2011ರಲ್ಲಿ ದೂರು ಸಲ್ಲಿಸಿದ್ದರು. ಜಾತಿ ಪ್ರಮಾಣ ಪತ್ರವನ್ನು ಅವರು ನಿವೃತ್ತಿ ಹೊಂದುವ ಕೆಲ ದಿನಗಳ ಮುಂಚೆ ಅಧಿಕಾರಿಗಳು ರದ್ದುಪಡಿಸಿದ್ದರು.
ಇದನ್ನು ಪ್ರಶ್ನಿಸಿ ಗೋಪಮ್ಮ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಗೋಪಮ್ಮ ಅವರ ವಾದವನ್ನು ಪುರಸ್ಕರಿಸಿ ಅವರ ಎಲ್ಲಾ ಸವಲತ್ತುಗಳನ್ನು ವಿತರಿಸುವಂತೆ ಆದೇಶ ನೀಡಿತ್ತು. ಅಲ್ಲದೇ, ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿ ಸವಲತ್ತು ಪಡೆಯಲು ಹಕ್ಕು ಪ್ರತಿಪಾದಿಸಬಾರದು ಎಂದು ತಿಳಿಸಿತ್ತು.
ಇದನ್ನು ಪ್ರಶ್ನಿಸಿ ಮಹದೇವ್ ಅವರು ಮತ್ತೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠದ ಆದೇಶವನ್ನೇ ವಿಭಾಗೀಯ ಪೀಠ ಎತ್ತಿ ಹಿಡಿಯಿತು. ಬುಡಕಟ್ಟು ಸಮುದಾಯದ ಪುರುಷನನ್ನು ಅನ್ಯ ಜಾತಿಯ ಮಹಿಳೆ ಮದುವೆಯಾದರೆ ಮತ್ತು ಆ ಸಮುದಾಯದ ಹಿರಿಯರು ಒಪ್ಪಿಕೊಂಡರೆ ಆಕೆಯೂ ಅದೇ ಜಾತಿಯ ಪ್ರಮಾಣ ಪತ್ರ ಪಡೆಯಲು ಅರ್ಹಳು ಎಂಬುದಾಗಿ ಸುಪ್ರೀಂ ಕೋರ್ಟ್ ಪ್ರಕರಣವೊಂದಕ್ಕೆ ಸಂಬಂಧಿಸಿ ಆದೇಶ ನೀಡಿತ್ತು.
ಅದರ ಪ್ರಕಾರ, ಗೋಪಮ್ಮ ಅವರು ಜಾತಿ ಪ್ರಮಾಣ ಪತ್ರ ಪಡೆದಿರುವುದು ತಪ್ಪಲ್ಲ. ಆದರೆ, ಈಗಿನ ಸುಪ್ರೀಂ ಕೋರ್ಟ್ ಆದೇಶ ಬೇರೆ ರೀತಿಯಲ್ಲಿ ಇರುವ ಕಾರಣ ಮುಂದಿನ ದಿನಗಳಲ್ಲಿ ಈ ಹಕ್ಕು ಪ್ರತಿಪಾದಿಸಬಾರದು ಎಂದು ತಿಳಿಸಿದೆ.
ಅಲ್ಲದೇ, ಗೋಪಮ್ಮ ಅವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರಿಂದ ಮಹದೇವ್ ಅವರಿಗೆ ಯಾವುದೇ ಅನ್ಯಾಯವಾಗಿಲ್ಲ. ಹೀಗಾಗಿ, ಅವರು ದೂರು ಸಲ್ಲಿಸಲು ಆಗುವುದಿಲ್ಲ ಎಂದೂ ಪೀಠ
ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.