ಸಾಂಕೇತಿಕ ಚಿತ್ರ
ಬೆಂಗಳೂರು: ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡುವವರು ಇಚ್ಛಿಸಿದಲ್ಲಿ ಇನ್ನು ಮುಂದೆ ತಮ್ಮ ಗುರುತು ಗೋಪ್ಯವಾಗಿರಿಸಿಕೊಳ್ಳಬಹುದು ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಅಡಿ ಬ್ರೊಸೆಫ್ ಫೌಂಡೇಷನ್‌ನ ಸ್ಥಾಪಕ ದುಶ್ಯಂತ್ ದುಬೆ ಅವರು ಮಾಹಿತಿ ಕೋರಿ ಕಮಾಂಡ್ ಸೆಂಟರ್‌ನ ಡಿಸಿಪಿ ಅವರಿಗೆ ಅರ್ಜಿ ಸಲ್ಲಿಸಿದ್ದರು.
ನೆರವು ಕೋರಿ ಅಥವಾ ಅಪರಾಧ ಪ್ರಕರಣಗಳ ಬಗ್ಗೆ ಕರೆ ಮಾಡಿ ದೂರು ಕೊಡುವವರ ವಿವರಗಳು ಬಹಿರಂಗವಾಗುವ ಆತಂಕ ಕಾಡಿತ್ತು. ಆದರೆ, ಕರೆ ಮಾಡಿದ ವ್ಯಕ್ತಿಯು ಬಯಸಿದಲ್ಲಿ ಅವರ ಗುರುತಿನ ಮಾಹಿತಿಯನ್ನು ಗೋಪ್ಯವಾಗಿ ಇರಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಸಹಾಯವಾಣಿ ಮೂಲಕ ದಾಖಲಾಗುವ ದೂರಿನ ತನಿಖೆ ಮುಕ್ತಾಯಗೊಂಡ ನಂತರ ಪ್ರತಿಕ್ರಿಯೆ ಕೇಳಲಾಗುತ್ತದೆ. ಆಗ ಅತಿ ಕಡಿಮೆ ಸಿಂಗಲ್ ಸ್ಟಾರ್ ರೇಟಿಂಗ್ ನೀಡಲು ಅವಕಾಶ ಇದೆ. ಮನವಿ ಮಾಡಿದ್ದರೂ ಗುರುತು ಬಹಿರಂಗಪಡಿಸಿರುವ ಬಗ್ಗೆ ‘ಫೀಡ್ ಬ್ಯಾಕ್’ ತಂಡಕ್ಕೆ ದೂರುದಾರರು ತಿಳಿಸಬಹುದು. ಈ ಬಗ್ಗೆ ವರದಿ ತಯಾರಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಕಮಾಂಡ್ ಸೆಂಟರ್‌ನ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಡಿಸಿಪಿಗೆ ಕಳುಹಿಸಲಾಗುತ್ತದೆ. ಅವರು ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಸಹಾಯವಾಣಿಗೆ ಕರೆ ಮಾಡುವವರು ತಮ್ಮ ಗುರುತು ಗೋಪ್ಯವಾಗಿರಲಿ ಎಂದು ಹೇಳಿದರೆ ಅಂತಹವರ ವಿವರಗಳಿಗೆ ರಕ್ಷಣೆ ನೀಡಬೇಕು ಹಾಗೂ ಯಾವುದೇ ಕಾರಣಕ್ಕೂ ಗುರುತಿನ ಮಾಹಿತಿ ಬಹಿರಂಗಪಡಿಸಬಾರದು ಎಂದು ಸಹಾಯವಾಣಿ ಸಿಬ್ಬಂದಿಗೆ ಸೂಚನೆ ಕೊಡಲಾಗಿದೆ ಎಂದು ಬಿವಿಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಯೋಜನೆ ವ್ಯವಸ್ಥಾಪಕ ಕೆ.ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.