ADVERTISEMENT

ಮಹಾತ್ಮ ಗಾಂಧೀಜಿ ಹತ್ಯೆ ಕರಾಳ ನೆನಪು: ಸೌಹಾರ್ದ ಸಂಕಲ್ಪಕ್ಕಾಗಿ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 1:42 IST
Last Updated 31 ಜನವರಿ 2020, 1:42 IST
‘ಮಹಾ ಸಂಕಲ್ಪ ದಿನ’ದಲ್ಲಿ ಪಾಲ್ಗೊಂಡಿದ್ದ ಜನ, ಸಂವಿಧಾನದ ಪೀಠಿಕೆಯಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು – ಪ್ರಜಾವಾಣಿ ಚಿತ್ರ
‘ಮಹಾ ಸಂಕಲ್ಪ ದಿನ’ದಲ್ಲಿ ಪಾಲ್ಗೊಂಡಿದ್ದ ಜನ, ಸಂವಿಧಾನದ ಪೀಠಿಕೆಯಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು:ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ಕರಾಳ ದಿನವನ್ನು ಮಹಾ ಸಂಕಲ್ಪ ದಿನವಾಗಿ ಆಚರಿಸಿದ ‘ಸೌಹಾರ್ದತೆಗಾಗಿ ಕರ್ನಾಟಕ’ ಸಂಘಟನೆ ಸದಸ್ಯರು ಬೃಹತ್ ಮಾನವ ಸರಪಳಿ ನಿರ್ಮಿಸಿ, ಸೌಹಾರ್ದ ದೇಶ ನಿರ್ಮಾಣಕ್ಕೆ ಕರೆ ನೀಡಿದರು.

ನಗರದ ಪುರಭವನ ಎದುರು ಸೇರಿದ್ದ ಸದಸ್ಯರು ಪರಸ್ಪರ ಕೈ ಕೈ ಹಿಡಿದು ‘ದ್ವೇಷ ತೊಲಗಲಿ, ಸಹಬಾಳ್ವೆ ಬಲಗೊಳ್ಳಲಿ’ ಎಂಬ ಘೋಷವಾಕ್ಯ ಮೊಳಗಿಸಿದರು. ಹಲವು ಸಂಘಟನೆಗಳ ಸದಸ್ಯರೂ ಮಾನವ ಸರಪಳಿಗೆ ಕೈ ಜೋಡಿಸಿದರು.

ಪುರಭವನದಿಂದ ಹಡ್ಸನ್‌ ವೃತ್ತದವರೆಗಿನ ರಸ್ತೆಯ ಅಕ್ಕ–ಪಕ್ಕದಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು. ‘ದೇಶ ಉಳಿಸಿ, ಸಂವಿಧಾನ
ರಕ್ಷಿಸಿ’ ಹಾಗೂ ‘ಗಾಂಧಿ ಕೊಂದರೂ ಅವರ ತತ್ವ ಕೊಲ್ಲಲಾಗದು’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ADVERTISEMENT

ಬಹಿರಂಗ ಸಭೆಯಲ್ಲಿ ಮಾತನಾಡಿದಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ‘ತಲೆಕೆಟ್ಟ ಹಿಂದೂಗಳ ಕೋಪಕ್ಕೆ ಗುರಿಯಾದ ಗಾಂಧಿಯನ್ನು ಬುದ್ಧಿ ಇಲ್ಲದ ಹುಂಬನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ. ಆದರೆ, ಆತನಿಂದ ಗಾಂಧಿ ತತ್ವಗಳನ್ನು ಕೊಲ್ಲಲು ಆಗಲಿಲ್ಲ. ಇಂದಿನ ಪ್ರಧಾನಿ ನರೇಂದ್ರ ಮೋದಿಗೂ ಗಾಂಧಿ ತತ್ವಗಳನ್ನು ಕೊಲ್ಲಲಾಗದು’ ಎಂದರು.

‘ಗಾಂಧಿ ಹತ್ಯೆಗೂ 15 ದಿನ ಮುಂಚೆ ಆತ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ. ಸ್ವಾಗತ ಸಮಿತಿ ಅಧ್ಯಕ್ಷರ ಮನೆ ಅತಿಥಿಯಾಗಿದ್ದ. ವಾಪಸು ಹೋದ ನಂತರವೇ ಗಾಂಧಿಯನ್ನು ಹತ್ಯೆ ಮಾಡಿದ. ಇದರಿಂದ, ಆರ್‌ಎಸ್‌ಎಸ್‌ ಸಂಘಟನೆಯೇ ಗಾಂಧಿಯನ್ನು ಹತ್ಯೆ ಮಾಡಿತು ಎಂಬುದು ಸ್ಪಷ್ಟವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಮಾತಾನಾಡಿ,‘ದೇಶದಲ್ಲಿ ಯಾರು ಯಾರನ್ನಾದರೂ ಕೊಲ್ಲುವ ಸ್ಥಿತಿ ಹಾಗೂ ಸಮುದಾಯಗಳ ನಡುವೆ ಅಪನಂಬಿಕೆ ಮೂಡಿಸಿ ದ್ವೇಷದ ವಾತಾವರಣ ನಿರ್ಮಿಸಲಾಗುತ್ತಿದೆ. ಇದಕ್ಕೆಲ್ಲ ಸರಿಯಾದ ಉತ್ತರ ಕೊಡಬೇಕಿದೆ. ಎಲ್ಲರೂ ಸಹಬಾಳ್ವೆ, ಶಾಂತಿವಾತಾವರಣ ನಿರ್ಮಿಸಬೇಕಿದೆ’ ಎಂದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.